ಚಿಕ್ಕಮಗಳೂರು: ಕತ್ತು ಸೀಳಿ ಯುವಕನನ್ನು ಬರ್ಬರ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಡ್ಯ ನಾಗಮಂಗಲದ ಮನೋಜ್, ಕೌಶಿಕ್, ಬೆಂಗಳೂರು ಆರ್.ಆರ್.ನಗರದ ಕೃಷ್ಣ ಮತ್ತು ಕೆಂಗೇರಿಯ ರಾಜಬಾಬು ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆಯಲ್ಲಿ ತರೀಕೆರೆ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ವರನ್ನು ಒಳಗೊಂಡ ತಂಡವನ್ನು ರಚಿಸಿದ್ದು, 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದು, ತನಿಖಾ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ಮೂಲದ ದರ್ಶನ್ ಎಂಬಾತನನ್ನು ಕಡೂರು ತಾಲೂಕಿನ ಹುಲಿಗೊಂದಿ ಹೊಸೂರು ಬಳಿ ನಿನ್ನೆ ಮಧ್ಯರಾತ್ರಿ ದೂರವಾಣಿ ಕರೆ ಮಾಡಿ ಕರೆಸಿ ಕತ್ತು ಸೀಳಿ ಬರ್ಬರವಾಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.
ದರ್ಶನ್ ಬೆಂಗಳೂರಿನಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದು, ಹಾಫ್ ಮರ್ಡರ್ ಕೇಸಿನಲ್ಲಿ ಈ ಹಿಂದೆ ಈತ ಜೈಲು ಸೇರಿದ್ದ ಎನ್ನಲಾಗಿದ್ದು, ಜಾಮೀನು ಬಳಿಕ ಇಬ್ಬರು ಸ್ನೇಹಿತರ ಜೊತೆ ಬಂದಿದ್ದು ಕಡೂರಿನ ಮಾಡಾಳು ಗ್ರಾಮದ ತಾತನ ಮನೆಯಲ್ಲಿ ಇದ್ದನು.
ವಾರದ ಹಿಂದೆ ಬೆಂಗಳೂರಿಗೆ ಹೋಗಿ ಮತ್ತೆ ವಾಪಸ್ ಬಂದಿದ್ದ. ತಾತನಿಗೆ ಫ್ರೆಂಡ್ಸ್ ಬಂದಿದ್ದಾರೆ. ಹೊಲದ ಶೆಡ್ ನಲ್ಲಿ ಮಲಗುತ್ತೇನೆ ಎಂದು ಹೇಳಿ ಹೋಗಿದ್ದ.
ದರ್ಶನ್ ಕಾರಿನಲ್ಲಿ ಹೋಗಿದ್ದನ್ನು ದರ್ಶನ್ ತಾತ ಕೂಡ ನೋಡಿದ್ದರು. ರಾತ್ರಿ ಹೊಲಕ್ಕೆ ಹೋಗಿ ನೋಡಿದಾಗ ಶೆಡ್ ನಲ್ಲಿ ದರ್ಶನ್ ಇರಲಿಲ್ಲ. ಸ್ನೇಹಿತರ ಜೊತೆ ಎಲ್ಲೋ ಹೋಗಿರಬಹುದು ಎಂದು ತಾತ ಮನೆಗೆ ಬಂದಿದ್ದರು.
ಬೆಳಿಗ್ಗೆ ಮಾಡಾಳು ಗ್ರಾಮದ ತುಸು ದೂರದಲ್ಲಿ ದರ್ಶನ್ ಮೃತದೇಹ ಪತ್ತೆಯಾಗಿದೆ. ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದು ಕಿಡಿಗೇಡಿಗಳು ಪರಾರಿಯಾಗಿದ್ದರು.
ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೈಯಕ್ತಿಕ ನಿಂದನೆ ಘಟನೆಗೆ ಮೂಲ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಅಮಟೆ ತಿಳಿಸಿದ್ದಾರೆ