ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದ್ದ ಕ್ಷುಲ್ಲಕ ಕಾರಣಕ್ಕಾಗಿ ಯುವಕನೋರ್ವನಿಗೆ ಚಾಕುವಿನಿಂದ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ರಾತ್ರಿ 7.30ರ ಸಮಯದಲ್ಲಿ ವಿಘ್ನೇಶ್ ಮನೆಗೆ ಹೋಗುತ್ತಿರುವಾಗ ರಿಯಾಜ್ ಎಂಬುವರ ತಳ್ಳುಗಾಡಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಅಲ್ಲಿ ನೆರೆದಿದ್ದ ಎರಡು ಕೋಮಿನ ಜನರು ಸೇರಿ ಇಬ್ಬರಿಗೂ ಸಮಾಧಾನಪಡಿಸಿ ಕಳುಹಿಸಿದ್ದಾರೆ. ಆದರೆ ರಾತ್ರಿ 9 ಗಂಟೆ ಸುಮಾರಿಗೆ ಫಾಜಿಲ್, ನವಾಜ್, ಸೈಯ್ಯದ್, ರುಮಾನ್, ಸುಹೀಲ್ ಸೇರಿದಂತೆ ಅನೇಕರ ಗುಂಪು ಮನೆ ಹತ್ತಿರ ಹೋಗಿ ಗಲಾಟೆ ನಡೆಸಿದ್ದು, ಫಾಜಿಲ್ ಎಂಬುವನು ವಿಘ್ನೇಶ್ಗೆ ಚಾಕು ಹಾಕಿದ್ದಾನೆ.
ಪ್ರಕರಣ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಯಾವುದೇ ಅಹಿತಕರ ಘಟನೆ ಸೂಕ್ತ ಕ್ರಮ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು ಎಂದು ಬುಧವಾರ ಬೆಳಿಗ್ಗೆ ಜಿಲ್ಲಾ ಸಹಾಯಕ ರಕ್ಷಣಾಧಿಕಾರಿ ಜಿ. ಕೃಷ್ಣಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.
ಚಾಕು ಇರಿತಕ್ಕೆ ಒಳಗಾಗಿರುವ ವಿಘ್ನೇಶ್ ದೂರು ನೀಡಿದ್ದು, ಕೃತ್ಯದಲ್ಲಿ ಭಾಗಿಯಾದ ಆರು ಜನ ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಲಾಗಿದ್ದು, ತಲೆಮರಿಸಿಕೊಂಡ ಉಳಿದ ಇಬ್ಬರಿಗಾಗಿ ಶೋಧ ನಡೆದಿದೆ.















