ಮನೆ ಅಪರಾಧ ಚಾಮರಾಜನಗರದಲ್ಲಿ ಹಣದಾಸೆಗೆ ಮಗು ಮಾರಾಟ: ತಂದೆಯ ಬಂಧನ

ಚಾಮರಾಜನಗರದಲ್ಲಿ ಹಣದಾಸೆಗೆ ಮಗು ಮಾರಾಟ: ತಂದೆಯ ಬಂಧನ

0

ಚಾಮರಾಜನಗರ(Chamarajanagar): ಹಣದಾಸೆಗೆ ಮಗುವೊಂದನ್ನು ಮಾರಾಟ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬoಧ ಮಗುವಿನ ತಂದೆಯನ್ನು ಪಟ್ಟಣ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಾಮರಾಜನಗರದ ನ್ಯಾಯಾಲಯದ ರಸ್ತೆ ಬಡಾವಣೆಯ ವಾಸಿ, ಹೋಟೆಲ್ ಕಾರ್ಮಿಕ ಬಸಪ್ಪ (೩೫) ಮತ್ತು ಆತನ ಪತ್ನಿ ನಾಗವೇಣಿ ಎಂಬಾಕೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಪಟ್ಟಣ ಠಾಣೆಯ ಪೊಲೀಸರು ಜೊತೆಗೂಡಿ ಮಂಗಳವಾರ ಕಾರ್ಯಾಚರಣೆ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನಗರದ ಹೋಟೆಲ್‌’ವೊಂದರಲ್ಲಿ ಕೆಲಸಕ್ಕಿದ್ದ ಬಸಪ್ಪ ತನ್ನ ಪತ್ನಿ ನಾಗವೇಣಿ ಜೊತೆ ನಗರದಲ್ಲಿ ವಾಸವಿದ್ದ. ಈ ದಂಪತಿಗೆ ೭ ವರ್ಷದ ಮಗ ಇದ್ದಾನೆ. ೨೮ ದಿನಗಳ ಹಿಂದಷ್ಟೇ ಎರಡನೇ ನಾಗವೇಣಿಗೆ ಹೆರಿಗೆಯಾಗಿ ಮತ್ತೊಂದು ಗಂಡು ಮಗು ಜನಿಸಿತ್ತು.
ಆ ಮಗುವನ್ನು ಬಸಪ್ಪ ಗಾಳೀಪುರದ ವ್ಯಕ್ತಿಯೊಬ್ಬನ ಮೂಲಕ ಬೆಂಗಳೂರಿನ ವ್ಯಕ್ತಿಗೆ ೫೦ ಸಾವಿರ ರೂ.ಗೆ ೬ ದಿನಗಳ ಹಿಂದೆ ಮಾರಾಟ ಮಾಡಿರುವುದಾಗಿ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ಪತ್ನಿ ನಾಗವೇಣಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ತನಗೆ ಸಾಲದ ಹೊರೆ ಇದೆ. ಆದ್ದರಿಂದ ಮಗು ಮಾರಾಟ ಮಾಡೋಣ ಎಂದು ಬಸಪ್ಪ ಪತ್ನಿಯನ್ನು ಒತ್ತಾಯಿಸಿ ಕೊನೆಗೆ ಹಿಂಸೆ ಕೊಟ್ಟಿದ್ದಾನೆ. ಇದಕ್ಕೆ ಪತ್ನಿ ಒಪ್ಪದಿದ್ದಾಗ ತಾನು ಮನೆ ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿ ಮಗುವನ್ನು ಮಾರಾಟ ಮಾಡಲಾಗಿದೆ.
ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಮನೆಗೆ ಬಂದ ೨೮ ದಿನಗಳಲ್ಲಿ ಬಸಪ್ಪ ತನ್ನ ಜೊತೆ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಗಾಳೀಪುರದ ವ್ಯಕ್ತಿಯೊಬ್ಬರನ್ನು ಕರೆತಂದು ಮೊಬೈಲ್‌ನಲ್ಲಿ ಮಗುವಿನ ಫೋಟೋ ತೆಗೆದುಕೊಂಡು ಹೋಗಿದ್ದರು.
ನಾಲ್ಕೆದು ದಿನಗಳ ನಂತರ ದಂಪತಿಯನ್ನು ಗಾಳೀಪುರದ ಮನೆಯೊಂದಕ್ಕೆ ಕರೆಸಿಕೊಂಡು ಮಗುವನ್ನು ಬೆಂಗಳೂರಿನ ವ್ಯಕ್ತಿಗೆ ಮಾರಾಟ ಮಾಡಲಾಯಿತು. ಬಸಪ್ಪನಿಗೆ ೫೦ ಸಾವಿರ ರೂ. ನೀಡಲಾಗಿದೆ ಎಂದು ಮಹಿಳಾ ರಕ್ಷಣಾ ಘಟಕದ ಅಧಿಕಾರಿ ಕುಮಾರ್ ತಿಳಿಸಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತ ಸಂಘಟನೆ ಸಮತಾ ಸೊಸೈಟಿಯ ದೀಪಾಬುದ್ದೆ ಅವರು ನೆರೆ ಹಾವಳಿಯಿಂದ ಲಿಂಗತ್ವ ಅಲ್ಪ ಸಂಖ್ಯಾತರ ಸ್ಥಿತಿಗತಿ ಹೇಗಿದೆ ಎಂಬುದರ ಪರಿಶೀಲನೆ ನಡೆಸುವಾಗ ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ.