ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ(ಸಿಎಸ್’ಎಎಂ) ಸಂಬಂಧಿಸಿದ ಆಡಿಯೊ, ವಿಡಿಯೊಗಳನ್ನು ಆನ್’ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪದಡಿ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ದೇಶದ ಹಲವೆಡೆ ದಾಳಿ ನಡೆಸಿದೆ.
ಇಂಟರ್’ಪೋಲ್ ಘಟಕದ ಮಾಹಿತಿ ಆಧರಿಸಿ ದೆಹಲಿ, ತಿರುಚಿರಾಪಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಪರೇಷನ್ ‘ಮೇಘ ಚಕ್ರ’ದ ಭಾಗವಾಗಿ ಸೆಪ್ಟೆಂಬರ್’ನಲ್ಲಿ ಸಿಬಿಐ ಶೋಧ ನಡೆಸಿತ್ತು. ದೇಶದ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 56 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು.
ಕ್ಲೌಡ್ ಸ್ಟೋರೇಜ್ ಬಳಸಿಕೊಂಡು ಇಂಟರ್ನೆಟ್’ನಲ್ಲಿ ಸಿಎಸ್’ಎಎಂ ದಂಧೆ ನಡೆಸುತ್ತಿದ್ದ ಪೆಡ್ಲರ್’ಗಳ ವಿರುದ್ಧ ಕಳೆದ ವರ್ಷ ನಡೆದ ಆಪರೇಷನ್ ಕಾರ್ಬನ್ ದಾಳಿ ಸಮಯದಲ್ಲಿ ಪಡೆದ ಗುಪ್ತಚರ ಮಾಹಿತಿ ಮತ್ತು ಸಿಂಗಾಪುರದ ಇಂಟರ್’ಪೋಲ್ ಮಾಹಿತಿ ಆಧರಿಸಿ ಈ ದಾಳಿ ನಡೆದಿತ್ತು.
ಅಪ್ರಾಪ್ತರ ಲೈಂಗಿಕ ಚಟುವಟಿಕೆಗಳ ಆಡಿಯೊ-ದೃಶ್ಯಗಳನ್ನು ಪ್ರಸಾರ ಮಾಡಲು ಪೆಡ್ಲರ್’ಗಳು ಬಳಸುವ ಕ್ಲೌಡ್ ಸ್ಟೋರೇಜ್ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು.