ಮನೆ ಅಪರಾಧ ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: ವೈದ್ಯ ಸೇರಿ ಐವರ ಬಂಧನ

ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: ವೈದ್ಯ ಸೇರಿ ಐವರ ಬಂಧನ

0

ಬೆಳಗಾವಿ: ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆರ್‌ಎಂಪಿ ವೈದ್ಯ ಸೇರಿ ಐದು ಜನರನ್ನು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಈ ಆರೋಪಿಗಳು ಮದುವೆಗೂ ಮುನ್ನ ಗರ್ಭಿಣಿಯಾಗಿ ಅಬಾರ್ಷನ್ ಮಾಡಿಸಬೇಕು ಅನ್ನೋರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಏಳು, ಎಂಟು ತಿಂಗಳ ಗರ್ಭಿಣಿಯರ ಆಪರೇಷನ್ ಮಾಡಿ ಮಗು ರಕ್ಷಣೆ ಮಾಡಿ ತಾವೇ ಸಾಕುವುದಾಗಿ ಹೇಳಿ ಮಗುವನ್ನು ಮಕ್ಕಳಿಲ್ಲದವರಿಗೆ ಹಣಕ್ಕಾಗಿ ಮಾರಾಟ ಮಾಡಿ ಹಣ ಮಾಡುತ್ತಿದ್ದರು. ಸದ್ಯ ಪೊಲೀಸರು ಈ ಮಕ್ಕಳ ಮಾರಾಟ ಜಾಲವನ್ನು ಪತ್ತೆ ಮಾಡಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಮದುವೆಗೂ ಮುಂಚೆ ಗರ್ಭಿಣಿಯಾಗಿ ಮಗುವನ್ನು ಸಾಕಲಾಗದೆ ನರಳಾಡುವ ಅಸಹಾಯಕ ಹೆಣ್ಮುಕ್ಕಳನ್ನು ಟಾರ್ಗೆಟ್ ಮಾಡಿ ಆರ್‌ಎಂಪಿ ವೈದ್ಯ ಅಬ್ದುಲ್ ಎಂಬುವವರು ಆಪರೇಷನ್ ಮಾಡಿ ಮಗುವನ್ನು ತಾವೇ ಸಾಕುವುದಾಗಿ ಹೇಳಿ ಮಗುವನ್ನು ರಕ್ಷಿಸುತ್ತಿದ್ದರು. ಬಳಿಕ ಎರಡ್ಮೂರು ತಿಂಗಳು ಮಗು ಆರೈಕೆ ಮಾಡಿ ಮಗುವನ್ನ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ಮಕ್ಕಳಿಲ್ಲದವರಿಗೆ ಅರವತ್ತು ಸಾವಿರದಿಂದ ಒಂದೂವರೆ ಲಕ್ಷ ಹಣಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ವಿಚಾರ ತಿಳಿದು ಮಕ್ಕಳ ಮಾರಾಟ ಗ್ಯಾಂಗ್ ಹಿಂದೆ ಬಿದ್ದಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಮತ್ತು ಕೇಂದ್ರ ಸಂಯೋಜಕರ ಟೀಮ್ ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಮತ್ತು ಕೇಂದ್ರ ಸಂಯೋಜಕರ ಟೀಮ್ ಈ ಜಾಲವನ್ನು ಭೇದಿಸಲು ಮೊದಲು ಮಕ್ಕಳ ಮಾರಾಟ ಜಾಲದ ಮಹಾದೇವಿ ಜೈನ್ ​ಗೆ ಸಂಪರ್ಕಿಸಿದ್ದರು. ಈ ವೇಳೆ ಆರೋಪಿ ಮಹಾದೇವಿ 1ಲಕ್ಷ 40 ಸಾವಿರ ರೂಪಾಯಿಗೆ ಮಗು ನೀಡುವುದಾಗಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಳು. ಇದಕ್ಕೆ ಒಪ್ಪಿ ಬೆಳಗಾವಿಯ ರಾಮತೀರ್ಥ ನಗರಕ್ಕೆ ಮಗು ತರುವಂತೆ ಅಧಿಕಾರಿಗಳು ಹೇಳಿದ್ದರು. ಈ ವೇಳೆ ಮಗುವಿನ ಜೊತೆಗೆ ಬಂದು ಮಹಾದೇವಿ ಆ್ಯಂಡ್ ಗ್ಯಾಂಗ್ ತಗ್ಲಾಕ್ಕೊಂಡಿದೆ. ಕಿಂಗ್ ಪಿನ್ ವೈದ್ಯ ಅಬ್ದಲ್ ಗಫಾರ್ ಖಾನ್ ನಿಂದ ಅರವತ್ತು ಸಾವಿರಕ್ಕೆ ಮಗು ಖರೀದಿ ಮಾಡಿದ್ದ ಮಹಾದೇವಿ ಅಲಿಯಾಸ್ ಪ್ರಿಯಾಂಕಾ ಜೈನ್, ಬಳಿಕ 1ಲಕ್ಷ 40ಸಾವಿರ ಹಣಕ್ಕೆ ಮಗು ಮಾರಾಟ ಮಾಡಲು ಯತ್ನಿಸಿ ಜೈಲು ಸೇರಿದ್ದಾರೆ.

ಪವಿತ್ರಾ ಮತ್ತು ಪ್ರವೀಣ್ ಇಬ್ಬರು ಪರಸ್ಪರ ಪ್ರೀತಿಸುತ್ತಿರುತ್ತಾರೆ. ವಿವಾಹಕ್ಕೂ ಮುನ್ನ ಇಬ್ಬರೂ ದೈಹಿಕ ಸಂಪರ್ಕ ಬೆಳಿಸಿ ಪವಿತ್ರಾ ಏಳು ತಿಂಗಳು ಗರ್ಭಿಣಿಯಾಗುತ್ತಾಳೆ. ಮನೆಯಲ್ಲಿ ಗೊತ್ತಾದ್ರೇ ಸಮಸ್ಯೆ ಆಗುತ್ತೆ ಅಂತಾ ಕಿತ್ತೂರಿನಲ್ಲಿರುವ ಅಬ್ದುಲ್ ಗಫಾರ್ ಖಾನ್ ಬಳಿ ಈ ಜೋಡಿ ಹೋಗುತ್ತೆ. ಈ ವೇಳೆ ಇಪ್ಪತ್ತು ಸಾವಿರ ಹಣ ಪಡೆದು ಆಪರಷೇನ್ ಮಾಡಿ ವೈದ್ಯ ಅಬ್ದುಲ್ ಮಗು ತೆಗೆದಿದ್ದರು. ಬಳಿಕ ಮಗುವನ್ನ ಅರವತ್ತು ಸಾವಿರಕ್ಕೆ ಮಹಾದೇವಿಗೆ ಮಾರಾಟ ಮಾಡಿದ್ದರು. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ಸಂಬಂಧ ಕಿಂಗ್ ಪಿನ್ ಕಿತ್ತೂರಿ‌ನ ಡಾ.ಅಬ್ದುಲ್ ಗಫಾರ್ ಲಾಡಖಾನ್, ನೇಗಿನಹಾಳದ ಮಹಾದೇವಿ ಜೈನ್, ಚಂದನ ಸುಬೇದಾರ್, ಪವಿತ್ರಾ ಮತ್ತು ಪ್ರವೀಣ್​ನನ್ನು ಪೊಲೀಸರು ಬಂಧಿಸಿದ್ದಾರೆ.