ನವದೆಹಲಿ : ಚೀನಾ ಅರುಣಾಚಲ ಪ್ರದೇಶದ ಮೇಲಿನ ಹಕ್ಕನ್ನು ತೈವಾನ್ನೊಂದಿಗೆ ಸಮಾನವಾಗಿ ತನ್ನ ಮೂಲಭೂತ ಆಸಕ್ತಿ ಎಂದು ಪರಿಗಣಿಸುತ್ತಿದೆ. ಅರುಣಾಚಲ, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ಇತರ ಪ್ರದೇಶಗಳ ಮೇಲಿನ ಹಕ್ಕುಗಳು 2049ರ ವೇಳೆಗೆ ಮಹಾನ್ ಪುನರುಜ್ಜೀವನ ಸಾಧಿಸುವಲ್ಲಿ ಪ್ರಮುಖವಾಗಿವೆ ಎಂದು ಉಲ್ಲೇಖಿಸಲಾದ ಅಮೆರಿಕಾದ ಪೆಂಟಗನ್ನ ವರದಿಯನ್ನು ಚೀನಾ ತಿರಸ್ಕರಿಸಿದೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಮಾತನಾಡಿ, ಪೆಂಟಗನ್ನ ವರದಿಯು ಚೀನಾದ ರಕ್ಷಣಾ ನೀತಿಯನ್ನು ವಿರೂಪಗೊಳಿಸುತ್ತದೆ, ಚೀನಾ ಮತ್ತು ಇತರ ದೇಶಗಳ ನಡುವೆ ಭಿನ್ನಾಭಿಪ್ರಾಯವನ್ನು ಬಿತ್ತುತ್ತದೆ ಮತ್ತು ಅಮೆರಿಕ ತನ್ನ ಮಿಲಿಟರಿ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ನೆಪವನ್ನು ಹುಡುಕುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಜಾಂಗ್ ಕ್ಸಿಯೋಗಾಂಗ್ ಕೂಡ ಪೆಂಟಗನ್ ವರದಿಯನ್ನು ಟೀಕಿಸಿದ್ದಾರೆ. ಇದು ರಕ್ಷಣೆ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಚೀನಾ ಮತ್ತು ಪಾಕಿಸ್ತಾನದ ನಡುವೆ ಬೆಳೆಯುತ್ತಿರುವ ಸಹಕಾರವನ್ನು ಸೂಚಿಸಿದೆ. ಮಿಲಿಟರಿ ನೆಲೆಯನ್ನು ಸ್ಥಾಪಿಸುವ ಯೋಜನೆಗಳನ್ನು ಸೂಚಿಸುತ್ತದೆ. ಅಮೆರಿಕಾ ಪ್ರತಿ ವರ್ಷ ಇಂತಹ ವರದಿಗಳನ್ನು ಬಿಡುಗಡೆ ಮಾಡುತ್ತದೆ. ಈ ಮೂಲಕ ಚೀನಾದ ಆಂತರಿಕ ವ್ಯವಹಾರಗಳಲ್ಲಿ ವಾಷಿಂಗ್ಟನ್ ತೀವ್ರವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ವರದಿಯು ಚೀನಾದ ರಾಷ್ಟ್ರೀಯ ರಕ್ಷಣಾ ನೀತಿಯನ್ನು ದುರುದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಿಕೊಂಡಿದೆ. ಅದರ ಮಿಲಿಟರಿ ಅಭಿವೃದ್ಧಿಯ ಬಗ್ಗೆ ಆಧಾರರಹಿತ ಊಹೆಗಳನ್ನು ಮಾಡಿದೆ ಮತ್ತು ಚೀನಾದ ಸಶಸ್ತ್ರ ಪಡೆಗಳ ಚಟುವಟಿಕೆಗಳನ್ನು ನಿಂದಿಸಿದೆ ಎಂದಿದ್ದಾರೆ. ಇದೇ ವೇಳೆ ಪಾಕಿಸ್ತಾನದೊಂದಿಗೆ ಚೀನಾದ ರಕ್ಷಣಾ ಸಹಕಾರವನ್ನು ವಿಸ್ತರಿಸುವ ಬಗ್ಗೆ ನೇರವಾಗಿ ಮಾತನಾಡಲು ಜಾಂಗ್ ನಿರಾಕರಿಸಿದ್ದಾರೆ.
ಭಾರತ-ಚೀನಾ ಸಂಬಂಧಗಳ ಕುರಿತ ಈ ವರದಿ ಬಗ್ಗೆ ಪ್ರತಿಕ್ರಿಯಿಸಿದ ಲಿನ್, ಬೀಜಿಂಗ್ ನವದೆಹಲಿಯೊಂದಿಗಿನ ತನ್ನ ಸಂಬಂಧಗಳನ್ನು ಕಾರ್ಯತಂತ್ರದ ಮತ್ತು ದೀರ್ಘಾವಧಿಯ ದೃಷ್ಟಿಕೋನದಿಂದ ಸಮೀಪಿಸುತ್ತಿದೆ. ನಾವು ಸಂವಹನವನ್ನು ಬಲಪಡಿಸಲು, ಪರಸ್ಪರ ನಂಬಿಕೆಯನ್ನು ಹೆಚ್ಚಿಸಲು, ಸಹಕಾರವನ್ನು ಉತ್ತೇಜಿಸಲು ಹಾಗೂ ಭಾರತದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿಭಾಯಿಸಲು, ಸ್ಥಿರವಾದ ದ್ವಿಪಕ್ಷೀಯ ಸಂಬಂಧವನ್ನು ಮುನ್ನಡೆಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.














