ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಕ್ಟರಿ ಸೆಲೆಬ್ರೇಷನ್ ಕಾರ್ಯಕ್ರಮದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಇದೀಗ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಹತ್ವದ ಎಫ್‌ಐಆರ್ ದಾಖಲಾಗಿದೆ.
ಆರಂಭದಲ್ಲಿ ಈ ಪ್ರಕರಣವನ್ನು ಯುಡಿಆರ್ (ಅಸಹಜ ಸಾವಿನ ವರದಿ) ರೂಪದಲ್ಲಿ ದಾಖಲಿಸಲಾಗಿತ್ತು. ಇದಕ್ಕೆ ಹಲವಾರು ರಾಜಕೀಯ ಹಾಗೂ ಸಾರ್ವಜನಿಕ ಆಕ್ಷೇಪಣೆಗಳ ಹೊರೆಯಾದ ಬಳಿಕ, ಅಂತಿಮವಾಗಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಸಾರ್ವಜನಿಕ ವಲಯದ ಗಂಭೀರ ಪ್ರಶ್ನೆಗಳ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಈ ಎಫ್‌ಐಆರ್‌ನಲ್ಲಿ ಆರ್‌ಸಿಬಿ ಫ್ರಾಂಚೈಸಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ), ಹಾಗೂ ಕಾರ್ಯಕ್ರಮ ಸಂಘಟನೆಯ ಜವಾಬ್ದಾರಿ ಹೊತ್ತಿದ್ದ ಡಿಎನ್ಎ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳನ್ನು ಪ್ರಾಥಮಿಕ ಆರೋಪಿಗಳಾಗಿರಿಸಲಾಗಿದೆ. ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 195 ಅಡಿಯಲ್ಲಿ ದಾಖಲಿಸಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಿಲ್ಲ. ಪೊಲೀಸ್ ಇಲಾಖೆಯ ಅನುಮತಿ ಪಡೆಯದೇ ಸಾಮಾಜಿಕ ಜಾಲತಾಣದಲ್ಲಿ (ಜೂ. 4) ಆರ್‌ಸಿಬಿ ತಂಡದ ವಿಕ್ಟರಿ ಪರೇಡ್ ಇದೆ ಅಂತ ಪ್ರಕಟಣೆ ನೀಡಿ, ಆ ಮೂಲಕ ಲಕ್ಷಾಂತರ ಜನರು ಜಮಾವಣೆಯಾಗಲು ನೇರ ಕಾರಣವಾಗಿರುವ ಆರ್‌ಸಿಬಿ ಮ್ಯಾನೇಜ್ ಮೆಂಟ್ ಅನ್ನು ಹೊಣೆಗಾರರನ್ನಾಗಿಸಿಲ್ಲ. ಇನ್ನು, ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿದ್ದ ಡಿಎನ್ಎ ಇವೆಂಟ್ ಮ್ಯಾನೇಜ್ ಮೆಟ್ ಸಂಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ.















