ಮನೆ ರಾಜ್ಯ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತ: ತಳ್ಳಾಟದಲ್ಲಿ ಪತಿಯಿಂದ ಬೇರ್ಪಟ್ಟ ಅಕ್ಷತಾ ಪೈ ಸಿಕ್ಕಿದ್ದು ಆಸ್ಪತ್ರೆಯಲ್ಲಿ ಶವವಾಗಿ

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತ: ತಳ್ಳಾಟದಲ್ಲಿ ಪತಿಯಿಂದ ಬೇರ್ಪಟ್ಟ ಅಕ್ಷತಾ ಪೈ ಸಿಕ್ಕಿದ್ದು ಆಸ್ಪತ್ರೆಯಲ್ಲಿ ಶವವಾಗಿ

0

ಬೆಂಗಳೂರು : ಆರ್‌ಸಿಬಿ ವಿಕ್ಟರಿ ಪರೇಡ್ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದ ಹೃದಯವಿದ್ರಾವಕ ಘಟನೆ ಮತ್ತೊಂದು ಬಲಿಯನ್ನು ಪಡೆದಿದೆ. ಉತ್ತರ ಕನ್ನಡದ ಕಾರವಾರ ಮೂಲದ ಅಕ್ಷತಾ ಪೈ (26) ಎಂಬ ಯುವತಿಯು, ಈ ಭೀಕರ ತಳ್ಳಾಟದ ನಡುವೆ ಪ್ರಾಣ ಕಳೆದುಕೊಂಡಿದ್ದಾರೆ.

ಅಕ್ಷತಾ ಪೈ ಅವರ ಪತಿ, ನಮ್ಮ ವರದಿಗಾರರೊಂದಿಗೆ ಮಾತನಾಡಿ, ದುಃಖಭರಿತವಾಗಿ ಘಟನೆಯ ವಿವರ ನೀಡಿದರು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆಯುತ್ತಿದ್ದ ಆರ್‌ಸಿಬಿ ಚಾಂಪಿಯನ್ಸ್ ಪೇರೆಡ್ ಅನ್ನು ನೋಡಲು ಅರ್ಧ ದಿನ ರಜೆ ತೆಗೆದುಕೊಂಡು ಪತ್ನಿಯೊಂದಿಗೆ ಬಂದಿದ್ದರು. ಗೇಟ್ ನಂಬರ್ 17 ರ ಮುಖಾಂತರ ಉಚಿತ ಪ್ರವೇಶ ನೀಡಲಾಗುತ್ತಿದ್ದು, ಈ ವಿಷಯ ತಿಳಿದ ತಕ್ಷಣ ಜೋಡಿಯು ಆ ದಿಕ್ಕಿಗೆ ತೆರಳಿತು.

ಆದರೆ ಗೇಟ್ ಅರ್ಧಮಟ್ಟಿಗೆ ಮಾತ್ರ ತೆರೆಯಲಾಗಿದ್ದರಿಂದ ಸಾವಿರಾರು ಅಭಿಮಾನಿಗಳು ಒಂದೇ ಬಾರಿ ಪ್ರವೇಶಕ್ಕೆ ನೂಕುನುಗ್ಗಲಿನತ್ತ ಮುಗಿದರು. ಈ ಹಿನ್ನಲೆಯಲ್ಲಿ ತೀವ್ರ ತಳ್ಳಾಟ ಉಂಟಾಗಿ ಅಕ್ಷತಾ ಮತ್ತು ಅವರ ಪತಿ ಬೇರ್ಪಟ್ಟಿದ್ದಾರೆ. ಕಾಲ್ತುಳಿತದ ವೇಳೆ ಇಬ್ಬರೂ ಬೀಳುತ್ತಾರೆ, ಆದರೆ ಯಾರೋ ಅಕ್ಷತಾ ಪತಿಯನ್ನು ಎಳೆದುಕೊಂಡು ಮೇಲೆತ್ತಿದ ಕಾರಣ ಅವರು ಬದುಕುಳಿದಿದ್ದಾರೆ.

ಅಕ್ಷತಾ ಪೈ ಅವರ ಪತಿ, ಪತ್ನಿಯನ್ನು ಎಲ್ಲೆಲ್ಲೋ ಹುಡುಕಾಡಿದರು. ಕೆಲವರು ಅವರು ವೈದೇಹಿ ಆಸ್ಪತ್ರೆಗೆ ಸಾಗಿಸಲ್ಪಟ್ಟಿದ್ದಾರೆ ಎಂದ ಹಿನ್ನಲೆಯಲ್ಲಿ ಅಲ್ಲಿ ತೆರಳಿ ಹುಡುಕಿದರು. ಆದರೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಕೊನೆಗೆ ಬೌರಿಂಗ್ ಆಸ್ಪತ್ರೆಯಿಂದ ಫೋನ್ ಕರೆ ಬಂದಿದ್ದು, ತಕ್ಷಣವೇ ಅವರು ಅಲ್ಲಿ ಧಾವಿಸಿದರು. ಆದರೆ ದುರಾದೃಷ್ಟವಶಾತ್, ವೈದ್ಯರು ಅಕ್ಷತಾ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು.

ಸರ್ಕಾರದ ನಿರ್ಲಕ್ಷ್ಯಕ್ಕೆ ಜನರಲ್ಲಿ ವಿಷಾದ ಹಾಗೂ ಕೋಪ ವ್ಯಕ್ತವಾಗಿದೆ. ಈ ಘಟನೆಯ ತನಿಖೆ ನಡೆಸಿ, ದುಃಖಪೀಡಿತ ಕುಟುಂಬಗಳಿಗೆ ನ್ಯಾಯ ದೊರಕಿಸಬೇಕು ಎಂಬ ಬೇಡಿಕೆ ಹೆಚ್ಚಾಗಿದೆ.