ಬೆಂಗಳೂರು: ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಅನೇಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಈ ಘಟನೆಯು ರಾಜ್ಯಾದ್ಯಂತ ತೀವ್ರ ಸಂತಾಪಕ್ಕೆ ಕಾರಣವಾಗಿದೆ. ಈ ದುರಂತದಲ್ಲಿ ಸಾವನ್ನಪ್ಪಿದ ಮಕ್ಕಳು ಹಾಗೂ ಅವರ ಕುಟುಂಬದ ನೋವನ್ನು ನೆನೆದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾವುಕರಾಗಿ ಕಣ್ಣೀರಿಟ್ಟರು.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಡಿಕೆಶಿ, ಈ ದುರಂತದ ಹಿನ್ನೆಲೆಯಲ್ಲಿ ಗದ್ಗದಿತರಾಗಿ, “ನನ್ನ ಹೊಟ್ಟೆ ಉರಿಯುತ್ತಿದೆ. ಆ ಮಕ್ಕಳ ತಾಯಂದಿರ ಮಾತುಗಳನ್ನು ಕೇಳೋಕೆ ಆಗ್ತಿಲ್ಲ. ಯಾರ ಕುಟುಂಬಕ್ಕೂ ಇದನ್ನು ಸಹಿಸೋ ಸಾಧ್ಯವಿಲ್ಲ” ಎಂದು ಭಾವೋದ್ವೇಗದಿಂದ ಹೇಳಿದರು.
ಪೊಲೀಸ್ ಇಲಾಖೆ ಕೂಡಲೇ ಹೇಳಿದರು ಇದನ್ನ ತಡೆಯಿರಿ ಅಂತ. ನಾನೂ ಕೂಡಲೇ ಮ್ಯಾನೇಜ್ಮೆಂಟ್‌ಗೆ ಹೇಳಿದೆ, ಅವರು ಹೋಗೋದಕ್ಕೂ ಕೂಡ ಜಾಗ ಇರಲಿಲ್ಲ. ಕೂಡಲೇ ಅವರನ್ನ ನಾನು ಕಾರ್‌ನಲ್ಲಿ ಕೂರಿಸಿಕೊಂಡು ಹೋದೆ, ಮಾಧ್ಯದವರು ಹೇಳಿದ ಬಳಿಕವೇ ನಮಗೆ ಗೊತ್ತಾಯ್ತು ಎಂದು ತಿಳಿಸಿದರು.
ಈ ಘಟನೆ ಹಿನ್ನೆಲೆಯಲ್ಲಿ ಕೆಲವು ರಾಜಕೀಯ ಪಕ್ಷಗಳು ಟೀಕೆ ನಡೆಸುತ್ತಿರುವುದನ್ನು ಉಲ್ಲೇಖಿಸಿ ಡಿಕೆ ಶಿವಕುಮಾರ್, “ಯಾರೇ ಟೀಕೆ ಮಾಡಲಿ, ಸದನದಲ್ಲಿ ಎಲ್ಲವನ್ನೂ ವಿವರಿಸುತ್ತೇನೆ. ರಾಜ್ ಕುಮಾರ್ ನಿಧನವಾಗಿದ್ದಾಗ ಏನಾಯ್ತು ಅನ್ನೋದನ್ನ ನಮಗೆ ಗೊತ್ತಿದೆ. ನಾನು ‘ಡರ್ಟಿ ಪಾಲಿಟಿಕ್ಸ್’ ಬಗ್ಗೆ ಮಾತನಾಡಲ್ಲ. ಯಾರೇ ತಪ್ಪು ಮಾಡಿದರೂ, ಸರ್ಕಾರ ಹೊಣೆ ತಗೆದುಕೊಳ್ಳುತ್ತದೆ. ಇದು ರಾಜ್ಯದ ಪ್ರತಿ ಮನಸ್ಸಿಗೂ ನೋವು ತಂದಿದೆ,” ಎಂದು ತಿಳಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಈ ದುರಂತದ ಮೇಲೆ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಿದ ಡಿಕೆಶಿ, “18 ವರ್ಷದ ಬಳಿಕ ಆರ್‌ಸಿಬಿ ಕಪ್ ಗೆದ್ದಿತ್ತು. ಸಹಜವಾಗಿ ಅಭಿಮಾನಿಗಳಿಗೆ ಭಾರಿ ಉತ್ಸಾಹ ಇತ್ತು. ಯಾರೂ ಈ ಮಟ್ಟದ ದುರಂತ ಆಗಬಹುದು ಎಂದು ಊಹಿಸಿರಲಿಲ್ಲ. ಈ ಪ್ರಕರಣ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನಾನು ಪೊಲಿಟಿಕಲ್ ಬಗ್ಗೆ, ವಿಪಕ್ಷದ ಟೀಕೆ ಬಗ್ಗೆ ಮಾತನಾಡಲ್ಲ. ನಾನು ಜನರಿಗೆ ಮಾತ್ರ ಉತ್ತರ ಕೊಡ್ತೀನಿ ಎಂದು ತಿಳಿಸಿದರು.














