ಬೆಂಗಳೂರು: ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿಕೊಂಡಿದೆ. ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ ಹಿನ್ನಲೆಯಲ್ಲಿ, ಹೈಕೋರ್ಟ್ ತುರ್ತು ಕ್ರಮವಾಗಿ ಈ ನಿರ್ಧಾರ ಕೈಗೊಂಡಿದ್ದು, ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಿದೆ.
ಕಾಲ್ತುಳಿತಕ್ಕೆ ಕಾರಣವಾದ ಭದ್ರತಾ ಲೋಪಗಳು ಎಷ್ಟು ಗಂಭೀರವಾಗಿವೆ ಎಂಬ ಬಗ್ಗೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರಕ್ಕೆ ಸ್ಥಳದಲ್ಲಿನ ಭದ್ರತಾ ವ್ಯವಸ್ಥೆ, ಅವ್ಯವಸ್ಥೆ ಮತ್ತು ನಡೆದ ಘಟನೆ ಕುರಿತಾಗಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ಘಟನೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಗಳ ಮೇಲ್ವಿಚಾರಣಾ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕೆಂದು, ಆಮ್ ಆದ್ಮಿ ಪಕ್ಷದ ಯುವ ಘಟಕದ ಅಧ್ಯಕ್ಷ, ವಕೀಲ ಲೋಹಿತ್ ಹನುಮಪುರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಈ ಮಧ್ಯೆ, ಈ ದುರಂತಕ್ಕೆ ಸರ್ಕಾರದ ನಿರ್ಲಕ್ಷ್ಯವನ್ನೇ ಪ್ರಮುಖ ಕಾರಣವೆಂದು ಹಲವರು ಆರೋಪಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಈ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮುಂದಿನ ಕೆಲ ದಿನಗಳಲ್ಲಿ ನ್ಯಾಯಾಲಯದ ತೀರ್ಮಾನಗಳು ಹಾಗೂ ತನಿಖಾ ವರದಿಗಳ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.














