ಬೆಂಗಳೂರು: ಪೊಲೀಸರು ಯಾವುದೇ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಠಾಣೆಗೆ ಕರೆಸಿಕೊಳ್ಳುವಾಗ ನೀಡುವ ನೋಟಿಸ್ನಲ್ಲಿ ಕ್ರೈಂ ನಂಬರ್, ಎಫ್‌ಐಆರ್ ಪ್ರತಿ, ಅಪರಾಧ ಏನು ಎಂಬ ಬಗೆಗಿನ ಮಾಹಿತಿ ಮತ್ತು ದೂರಿನ ಸಂಕ್ಷಿಪ್ತ ವಿವರವನ್ನೊಳಗೊಂಡ ಮಾಹಿತಿಯನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅಲ್ಲದೆ, ಈ ಸಂಬಂಧ ಸಾರ್ವಜನಿಕರ ಅವಗಾಹನೆಗಾಗಿ ರಾಜ್ಯ ಗೃಹ ಕಾರ್ಯದರ್ಶಿ ಮತ್ತು ಡಿಜಿಐಜಿಪಿ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅಮೃತಹಳ್ಳಿ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮೊಬೈಲ್ ಫೋನ್ನಲ್ಲಿ ವಾಟ್ಸ್ ಆಪ್ ಮೂಲಕ, ನಾಳೆ ನೀವು ಠಾಣೆಗೆ ಹಾಜರಾಗಬೇಕು ಎಂದು ಕಳುಹಿಸಿದ್ದ ಸಂದೇಶವನ್ನು ಪ್ರಶ್ನಿಸಿ ಪತ್ರಕರ್ತ ಟಿ.ಆರ್. ಶಿವಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ 2023ರ ಕಲಂ 35ರ ಅನುಸಾರ ಆರೋಪಿಗೆ ಮಾಹಿತಿ ನೀಡದೆ ಹೋದಲ್ಲಿ ಅಂತಹ ಆರೋಪಿಯು ಠಾಣಾಧಿಕಾರಿ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ. ಅಂತೆಯೇ, ಪೊಲೀಸರು ಇಂತಹ ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ತಿಳಿಸಲಾಗಿದೆ ಎಂದು ನ್ಯಾಯಪೀಠ ತನ್ನ ಆದೇಶಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ : ನನಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ವಿದ್ಯುನ್ಮಾನ ಮಾಧ್ಯಮದ ಸಿಇಒವೊಬ್ಬರು ನೀಡಿದ ದೂರಿನ ಅನುಸಾರ ಅಮೃತಹಳ್ಳಿ ಠಾಣೆಯ ಪೊಲೀಸರು ಅರ್ಜಿದಾರ ಟಿ.ಆರ್. ಶಿವಪ್ರಸಾದ್‌ಗೆ ಮೊಬೈಲ್ ಫೋನ್ನಲ್ಲಿ ವಾಟ್ಸ್ ಅಪ್ ಮೂಲಕ ಸಂದೇಶ ಕಳುಹಿಸಿ ನಾಳೆ ಠಾಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಶಿವಪ್ರಸಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.