ಚಿತ್ರದುರ್ಗ: ನಗರದ ಕವಾಡಿಗರಹಟ್ಪಿಯಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿದ್ದು, 100ಕ್ಕೂ ಅಧಿಕ ಮಂದಿ ಅಸ್ವಸ್ವರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಗ್ರೂಪ್ ಉದ್ಯೋಗಿಯಾಗಿರುವ ಪಂಪ್ ಆಪರೇಟರ್ ಸಿ.ಹೆಚ್. ಪ್ರಕಾಶ್ ಬಾಬು ಅವರನ್ನು ಜಿಲ್ಲಾಧಿಕಾರಿ ಜಿಆರ್ ಜೆ ದಿವ್ಯಪ್ರಭು ಅಮಾನತು ಮಾಡಿದ್ದಾರೆ. ಅಲ್ಲದೇ, ಹೊರ ಏಜೆನ್ಸಿಗಳಿಂದ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದ ಇಬ್ಬರನ್ನು ಹುದ್ದೆಯಿಂದ ಕಿತ್ತುಹಾಕಲಾಗಿದೆ. ಅಲ್ಲದೇ. ಎಇಇ ಮಂಜುನಾಥ್ ಆರ್.ಗಿರಡ್ಡಿ ಮತ್ತು ಕಿರಿಯ ಎಂಜಿನಿಯರ್ ಕಿರಣ್ ಅವರನ್ನು ಅಮಾನತುಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಇನ್ನೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ವರದಿ ಬಹಿರಂಗವಾಗಿದೆ. ವಾಂತಿ, ಭೇದಿ ಪ್ರಕರಣಗಳ ಕುರಿತು ಕುಡಿಯುವ ನೀರಿನ ಮಾದರಿ ಹಾಗೂ ಮಲದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, ನೀರು ‘ಕುಡಿಯಲು ಯೋಗ್ಯವಲ್ಲದ್ದು’ ಎಂದು ಹೇಳಲಾಗಿದೆ ಮತ್ತು ಮಲದ ಮಾದರಿಗಳಲ್ಲಿ ವೈಬ್ರಿಯೋ ಸ್ಪೀಸೀಸ್ ಗ್ರೋನ್ ಕಲ್ಚರ್, (ನೀರಿನ ಸೂಕ್ಷ್ಮಾಣು ಜೀವಿಗಳು) ಇದ್ದವೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಕಾಲರಾ ಮಾದರಿ ಅಂಶ ಪತ್ತೆಯಾಗಿದೆ. ಇನ್ನು ಪ್ರಕರಣ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಾಕಿ ಇದೆ.
ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ: ಘಟನೆ ಕುರಿತಂತೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ತನಿಖೆಗೆ ಆದೇಶಿಸಿದ್ದು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಈ ತಂಡ ಸ್ಥಳ ಪರಿಶೀಲನೆ ಮಾಡಿ ಮೂರು ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ.
ಅಸ್ವಸ್ಥರ ಆರೋಗ್ಯ ವಿಚಾರಿಸಿದ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ, ಕಲುಷಿತ ನೀರು ಸೇವಿಸಿ ಮೃತರಾದವರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು. ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.