ಚಿತ್ರದುರ್ಗ: ಮಗಳ ಶಾಲಾ ಪ್ರವೇಶಕ್ಕಾಗಿ ಊರಿಗೆ ತೆರಳುತ್ತಿದ್ದ ತಂದೆಯೊಬ್ಬರು ಚಿತ್ರದುರ್ಗದಲ್ಲಿ ಮಾರ್ಗಮಧ್ಯೆ ಹತ್ಯೆಗೀಡಾದ ದುರಂತ ಪ್ರಕರಣ ಬೆಳಕಿಗೆ ಬಂದಿದೆ. ಬಸ್‌ನಿಂದ ಇಳಿದು ಮದ್ಯ ಸೇವನೆಗೋಸ್ಕರ ಬಾರ್‌ಗೆ ಹೋದ ಸಂದರ್ಭದಲ್ಲಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಆತನನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.
ಹತ್ಯೆಗೀಡಾದ ವ್ಯಕ್ತಿ ಬಸವರಾಜ್ ಮುಡ್ನೂರ, ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದವನು. ಬೆಂಗಳೂರಿನಲ್ಲಿ ಜಿಯೋ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮಗಳು ಮತ್ತು ಮಗನೊಂದಿಗೆ ಪತ್ನಿ ಇಳಕಲ್‌ನಲ್ಲಿ ವಾಸವಾಗಿದ್ದು, ಮಗಳ ಶಾಲಾ ಅಡ್ಮಿಷನ್‌ಗಾಗಿ ಊರಿಗೆ ತೆರಳುತ್ತಿದ್ದರು.
ನಗರದ ರೈಲ್ವೆ ನಿಲ್ದಾಣ ಬಳಿಯ ನಿರ್ಜನ ಪ್ರದೇಶದಲ್ಲಿ ಜೂನ್ 1ರ ರಾತ್ರಿ ವ್ಯಕ್ತಿಯ ಬರ್ಬರ ಹತ್ಯೆ ನಡೆದು ಹೋಗಿತ್ತು. ಮೈಮೇಲೆ ಬಟ್ಟೆಗಳು ಸಹ ಇಲ್ಲದ ಸ್ಥಿತಿಯಲ್ಲಿ ಶವ ಪತ್ತೆ ಆಗಿತ್ತು. ಮೃತ ದೇಹದ ಗುರುತು ಹಚ್ಚುವುದೇ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಶವದ ಆಸುಪಾಸಿನಲ್ಲಿ ಪರಿಶೀಲನೆ ನಡೆಸಿದಾಗ ಮೃತ ವ್ಯಕ್ತಿಯ ಐಡಿ ಪತ್ತೆ ಆಗಿತ್ತು. ಬಳಿಕ ಮೃತ ವ್ಯಕ್ತಿ ಬೆಂಗಳೂರಿನಲ್ಲಿ ಜಿಯೋ ಕಂಪನಿ ಉದ್ಯೋಗಿ, ಬಾಗಲಕೋಟೆಯ ಇಳಕಲ್ ಮೂಲದ ಬಸವರಾಜ ಎಂಬುವುದು ಗೊತ್ತಾಗಿತ್ತು.
ಬಸವರಾಜ್ ಜಗಳಗಂಟನಲ್ಲ, ಯಾರೊಂದಿಗೂ ದ್ವೇಷ ಕಟ್ಟಿಕೊಂಡವನಲ್ಲ. ಅಕ್ರಮ ಸಂಬಂಧಗಳು, ಹಣದ ವ್ಯವಹಾರ ಯಾವುದೂ ಇಲ್ಲ ಎಂದು ಕುಟುಂಬಸ್ಥರು ಸ್ಪಷ್ಟವಾಗಿ ಹೇಳಿದ್ದರು. ಆದರೆ ಬಸವರಾಜನಿಗೆ ಕುಡಿಯುವ ಚಟವಿತ್ತು ಎಂಬಂಶ ತಿಳಿದಾಗಲೇ ಪೊಲೀಸರಿಗೆ ಕೊಲೆ ಮೂಲ ಹುಡುಕಲು ಸುಳಿವು ಸಿಕ್ಕಿತ್ತು.
ಬೆಂಗಳೂರಿನಿಂದ ಬಸ್ ಮೂಲಕ ಊರಿಗೆ ತೆರಳುತ್ತಿದ್ದ ಬಸವರಾಜ್, ಮಾರ್ಗ ಮಧ್ಯೆ ಚಿತ್ರದುರ್ಗದ ಬಸ್ ನಿಲ್ದಾಣ ಎದುರಿನ ಬಾರ್‌ಗೆ ಇಳಿದು ಮದ್ಯ ಸೇವನೆಗೆ ತೊಡಗಿದ್ದರು. ಕುಡಿದು ಸ್ನ್ಯಾಕ್‌ಗಳೊಂದಿಗೆ ಮೋಜಿನಲ್ಲಿದ್ದ ಅವರನ್ನು ಗಮನಿಸಿದ ಚಿತ್ರದುರ್ಗದ ಅಗಸನಕಲ್ಲು ಬಡಾವಣೆಯ ವಿಜಯ್ ಮತ್ತು ರಹೀಂ ಬಸವರಾಜನ ಟೇಬಲ್ಗೆ ಹೋಗಿ ಕುಳಿತುಕೊಳ್ಳುತ್ತಾರೆ. ಪರಿಚಯ ಮಾಡಿಕೊಂಡು ಫ್ರೆಂಡ್ಲಿಯಾಗಿ ನಡೆದುಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ನಂತರ ಬಾರ್‌ನಿಂದ ಹೊರಗೆ ಕರೆದೊಯ್ದು, ರೈಲ್ವೆ ನಿಲ್ದಾಣ ಬಳಿಯ ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ, ಅಲ್ಲಿಯೂ ಮದ್ಯ ಸೇವನೆ ನಡೆಸಿದ ಬಳಿಕ, ದುಷ್ಕರ್ಮಿಗಳು ಮತ್ತಷ್ಟು ಮದ್ಯಕ್ಕಾಗಿ ಹಣ ಬೇಡಿದ್ದರು. ಬಸವರಾಜ್ ನಿರಾಕರಿಸುತ್ತಿದ್ದಂತೆಯೇ ಅವರ ಬಟ್ಟೆ ಹರಿದು ಹಾಕಿ, ತಳ್ಳಿದ್ದಾಗ ಅವರು ಕೆಳಗೆ ಬಿದ್ದುಹೋದರು. ಈ ವೇಳೆ ತಲೆ ಮೇಲೆ ಇಟ್ಟಿಗೆ ಬಡಿದು ಅವರನ್ನು ಹತ್ಯೆಗೈದಿದ್ದಾರೆ.
ಸ್ಥಳದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮೂಲಕ ಇಬ್ಬರು ಆರೋಪಿಗಳಿರುವುದು ದೃಢಪಟ್ಟಿತು. ಸಿಪಿಐ ಉಮೇಶ್ ನೇತೃತ್ವದ ಪೋಲೀಸ್ ತಂಡವು ವಿಜಯ್ ಹಾಗೂ ರಹೀಮ್ ಅವರನ್ನು ಬಂಧಿಸಿದ್ದು, ವಿಚಾರಣೆಯಲ್ಲಿ ಇಬ್ಬರೂ ಸತ್ಯ ಬಾಯಿಬಿಟ್ಟಿದ್ದಾರೆ.
ಮದ್ಯವಷ್ಟೇ ಅಲ್ಲ, ಗಾಂಜಾ ಸೇವನೆಯಲ್ಲಿಯೂ ಈ ಇಬ್ಬರು ಭಾಗಿಯಾಗಿದ್ದಾರೆ ಎಂಬ ಅನುಮಾನಗಳಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿಗೆ ಕಳುಹಿಸಲಾಗಿದೆ.














