ಮನೆ ಸುದ್ದಿ ಜಾಲ ಚಿತ್ರದುರ್ಗ : ಮದುವೆ ಊಟ ಸೇವಿಸಿದ್ದ 100ಕ್ಕೂ ಅಧಿಕ ಮಂದಿ ಅಸ್ವಸ್ಥ

ಚಿತ್ರದುರ್ಗ : ಮದುವೆ ಊಟ ಸೇವಿಸಿದ್ದ 100ಕ್ಕೂ ಅಧಿಕ ಮಂದಿ ಅಸ್ವಸ್ಥ

0

ಚಿತ್ರದುರ್ಗ : ಮದುವೆ ಊಟ ಸೇವಿಸಿದ್ದ 100ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಮಲ್ಲಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸೋಮವಾರ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ.

ಮಲ್ಲಿಹಳ್ಳಿ ಗ್ರಾಮದ ಪ್ರಭುಲಿಂಗಪ್ಪ ಪುತ್ರನ ಮದುವೆ ಭಾನುವಾರ ಗವಿರಂಗಾಪುರ ಬೆಟ್ಟದ ಸಮೀಪ ನಡೆದಿತ್ತು. ಮದುವೆ ಪೂರ್ಣಗೊಂಡ ಬಳಿಕ ಸೋಮವಾರ ಬೆಳಿಗ್ಗೆಯಿಂದ ಅಹಾರ ಸೇವಿಸಿದ್ದವರು ವಾಂತಿ, ಬೇಧಿ, ಹೊಟ್ಟೆನೋವಿನಂತಹ ಲಕ್ಷಣಗಳಿಂದ ಬಳಲತೊಡಗಿದರು. ಹಲವರು ತಕ್ಷಣವೇ ನಿಕಟದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಅಸ್ವಸ್ಥರಾದವರಲ್ಲಿ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಸೇರಿದ್ದಾರೆ. ಸ್ಥಳೀಯ ಶ್ರೀರಾಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಾಸಿಗೆಗಳು ಭರ್ತಿಯಾದ ಹಿನ್ನೆಲೆಯಲ್ಲಿ, ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ತಾತ್ಕಾಲಿಕ ವೈದ್ಯಕೀಯ ಶಿಬಿರಗಳನ್ನು ತೆರೆದು ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ತಕ್ಷಣವೇ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಆಹಾರ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದೆ. ವಿಷಬಾಧೆಗೆ ಕಾರಣವಾದ ಆಹಾರದಲ್ಲಿನ ತೊಂದರೆಯ ಮೂಲವನ್ನು ಶೀಘ್ರ ತಿಳಿಯಲು ಪ್ರಯತ್ನ ನಡೆಯುತ್ತಿದೆ.

ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ಆರಂಭಿಸಿದ್ದಾರೆ.