ಚಿತ್ರದುರ್ಗ: ಅನುಮಾನಾಸ್ಪದವಾಗಿ ಸಾಗಣೆ ಮಾಡುತ್ತಿದ್ದ 6.39 ಕೋಟಿ ರು. ಮೌಲ್ಯದ ಚಿನ್ನ ಮತ್ತು ವಜ್ರಾಭರಣವನ್ನು ಕರ್ನಾಟಕ ಆಂಧ್ರಪ್ರದೇಶದ ಗಡಿಯಲ್ಲಿರುವ ಕಣಕುಪ್ಪೆ ಚೆಕ್’ಪೋಸ್ಟ್’ನಲ್ಲಿ ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿಯಿಂದ ಬೆಂಗಳೂರಿಗೆ ಸಾಗುತ್ತಿದ್ದ ವಾಹನವನ್ನು ಪರಿಶೀಲನೆ ಮಾಡಿದಾಗ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿವೆ. ಇವು ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗೆ ಸೇರಿದ್ದಾಗಿ ಸಾಗಣೆದಾರರು ಮಾಹಿತಿ ನೀಡಿದ್ದಾರೆ. ಸಕಾಲಕ್ಕೆ ದಾಖಲೆ ಹಾಜರುಪಡಿಸದ ಕಾರಣಕ್ಕೆ ವಶಕ್ಕೆ ಪಡೆದು ಪರಿಶೀಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಚೆಕ್’ಪೋಸ್ಟ್’ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ದಾಖಲೆ ಇಲ್ಲದ ಹಣ, ಸಾಮಗ್ರಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗುವುದು. ಇವು ಚುನಾವಣೆ ಅಕ್ರಮಕ್ಕೆ ಬಳಕೆಯಾಗುತ್ತಿರುವುದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.