ಮೈಸೂರು: ಮುಂದಿನ ತಿಂಗಳ 12ನೇ ತಾರೀಖು ರಾಜ್ಯದ ಬಜೆಟ್ ಮಂಡನೆಯಾಗಲಿದೆ. ಅಷ್ಟರಲ್ಲಿ ವಿರೋಧ ಪಕ್ಷದ ನಾಯಕರ ಆಯ್ಕೆ ಆಗಲಿದೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿವೆ. ವಿರೋಧ ಪಕ್ಷದ ನಾಯಕನ ಆಯ್ಕೆ ಶೀಘ್ರವೇ ಆಗಲಿದೆ ಎಂದು ಸಂಸದ ಪ್ರತಾಪ್ ಸಿಂಹ್ ತಿಳಿಸಿದರು.
ಇಂದು ಮೈಸೂರು ವಿಶ್ವವಿದ್ಯಾನಿಲಯದ ಜಾಗದಲ್ಲಿ ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಕಡ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯನ್ನು ಹಿರಿಯ ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದರು.
ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ 4 ಎಕರೆ ವ್ಯಾಪ್ತಿಯಲ್ಲಿ, ಸುಮಾರು 82.56 ಕೋಟಿ ರೂಪಾಯಿ ಮೊತ್ತದಲ್ಲಿ ನೂತನವಾಗಿ ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ನಿರ್ಮಾಣವಾಗುತ್ತಿದೆ. ಒಂದು ವರ್ಷದಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸೇವೆಗೆ ಲಭ್ಯವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ತಮಿಳುನಾಡಿಗೆ ಸರಿಯಾದ ಉತ್ತರ ನೀಡಿ
‘ಮೇಕೆದಾಟು ಯೋಜನೆ’ಯ ಜಾರಿಗೆ ತಕರಾರು ತೆಗೆಯುತ್ತಿರುವ ತಮಿಳುನಾಡಿಗೆ ಸರಿಯಾದ ರೀತಿಯಲ್ಲಿ ಉತ್ತರ ನೀಡಿ ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ಹಾಗೂ ಡಿ.ಕೆ ಶಿವಕುಮಾರ್ ಬಹಳ ಹೋರಾಟ ಮಾಡಿದ್ದರು. ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಧ್ವನಿ ಎತ್ತಿದ್ದರು. ಈಗ ಅವರದ್ದೆ ಸರ್ಕಾರ ಇದೆ. ಯೋಜನೆಯನ್ನು ಬೇಗ ಅನುಷ್ಠಾನಕ್ಕೆ ತರಬೇಕು. ಈ ಯೋಜನೆ ಅನುಷ್ಠಾನಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದರೆ ಅವರಿಗೆ ತಕ್ಕ ಉತ್ತರವನ್ನು ರಾಜ್ಯ ಸರ್ಕಾರ ನೀಡಬೇಕು. ಈ ಯೋಜನೆಯಲ್ಲಿ ಜಲ ವಿದ್ಯುತ್ ಹಾಗೂ ಕುಡಿಯುವ ನೀರಿಗೆ ಬಳಸಲು ಡಿಪಿಆರ್ ಹಾಕಲಾಗಿತ್ತು. ಈಗ ಜಲವಿದ್ಯುತ್ ಯೋಜನೆಯಾಗಿದೆ. ಇದರ ಅನುಷ್ಠಾನಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆದು ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಬೀಳುತ್ತಿಲ್ಲ. ಮಳೆಯನ್ನೇ ನಂಬಿ ರೈತರು ಬಿತ್ತನೆ ಮಾಡಿದ್ದಾರೆ. ಹುಣಸೂರು ಹಾಗೂ ಪಿರಿಯಾಪಟ್ಟಣದ ಭಾಗದಲ್ಲಿ ತಂಬಾಕು ಸೇರಿದಂತೆ ಇತರ ಬೆಳೆಗಳು ಒಣಗುತ್ತಿವೆ. ಜಲಾಶಯಗಳ ನೀರಿನ ಮಟ್ಟ ಕುಸಿತ ಕಂಡಿದೆ. ರಾಜ್ಯ ಸರ್ಕಾರ ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಿ, ನಂತರ ಬೆಳೆಗಳಿಗೆ ನೀರನ್ನು ಹರಿಸಬೇಕು. ಬೆಂಗಳೂರಿಗೆ ಕೆಆರ್ ಎಸ್ ನಿಂದಲೇ ಕುಡಿಯುವ ನೀರು ಹೋಗುತ್ತದೆ. ಆದರೆ ಕೆಆರ್ಎಸ್ ನಲ್ಲಿ ಈ ಬಾರಿ 80 ಅಡಿ ಮಾತ್ರ ನೀರಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಇದೇ ವೇಳೆ ಹೇಳಿದರು.