ಹಿಂದೆ ನರ್ಮದಾ ನದಿಯ ತೀರದಲ್ಲಿ ಭೃಗುಚಂಶೋತ್ಪನ್ನನಾದ ಋಚೀಕ ಮುನಿಯಿಂದ ಗಾಧಿ ರಾಜನ ಮಗಳಾದ ಸತ್ಯವತಿಯಲ್ಲಿ ಜನಿಸಿದ ಜಮದಗ್ನಿ ಎಂಬ ಋಷಿಯು ಆಶ್ರಮವಾಸಿಯಾಗಿದ್ದನು. ಇಲ್ಲಿ ಅನೇಕ ಮುನಿಕುಮಾರರು ವ್ಯಾಸಂಗ ಮಾಡುತ್ತಿದ್ದರು. ರೇಣು ಮುನಿಯ ಮಗಳಾದ ರೇಣುಕೆಯು ಜಮದಗ್ನಿಯ ಪತ್ನಿ. ಈ ಋಉಷಿ ದಂಪತಿಗಳಿಗೆ ರುಮಣ್ವಂತ, ಸುಷೇಣ, ವಸ್ತು, ವಿಶ್ವಾಚಸು, ರಾಮ ಎಂಬ ಐವರು ಪುತ್ರರಿದ್ದರು. ಕಿರಿಯವನಾದ ರಾಮನು ಆಗಿನ ಕಾಲದ ಆಯುಧವಾಗಿದ್ದ ʼಪರಶುʼ(ಕೊಡಲಿ)ವನ್ನು ಅಸ್ತ್ರವನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದರಿಂದ ʼಪರಶುರಾಮʼನೆಂದು ಕರೆಯಲ್ಪಟ್ಟನು. ಇವನ ಬಲಕಾರ್ಯ ಮಿಗಿಲಾಗಿತ್ತು. ಧನುರ್ವಿದ್ಯೆಯಲ್ಲಿಯೂ ಪಾರಂಗತನಾಗಿದ್ದನು.
ಚಂದ್ರವಂಶದ ಕೃತವೀರ್ಯ ಮಹಾರಾಜನ ಮಗ ಕಾರ್ತವೀರ್ಯಾರ್ಜುನ. ಈತ ವಿಂದ್ಯಾಪರ್ವತ ಪ್ರಾಂತದಲ್ಲಿರುವ ಮಾಹಿಷ್ಮತಿ ರಾಜ್ಯಕ್ಕೆ ಅರಸನಾಗಿದ್ದು ಮಹಾ ಪರಾಕ್ರಮಶಾಲಿಯೆನಿಸಿಕೊಂಡಿದ್ದರು. ತನ್ನ ಕುಲ ಗುರುವಾದ ಗರ್ಗಮುನಿಯ ಉಪದೇಶದಿಂದ ಬಹಳ ಕಾಲದವರೆಗೆ ದತ್ತಾತ್ರೇಯನನ್ನು ಉಪಾಸನೆ ಮಾಡಿ, ಆತನ ಮೂಲಕ ಅಜಯೇತ್ವವನ್ನು ಯುದ್ಧ ಸಮಯದಲ್ಲಿ ಸಾವಿರ ತೋಳುಗಳನ್ನು ಪಡೆಯುವ ವರವನ್ನು ಪಡೆದಿದ್ದನು.
ಅದೊಂದು ದಿನ ಕಾರ್ತವೀರ್ಯಾರ್ಜುನನ್ನು ಭೇಟಿಯಾಡಿ ದಣಿದು ಜಮದಗ್ನಿಯ ಆಶ್ರಮಕ್ಕೆ ಬಂದನು. ಸೈನ್ಯ ಸಹಿತವಾಗಿ ಬಂದ ರಾಜನಿಗೆ ಆ ಋಷಿಯು ತನ್ನ ಬಳಿ ಇರುವ ಸುರಧೇನುವಿನ ಧಯೆಯಿಂದ ಎಲ್ಲರಿಗೂ ಮೃಷ್ಟಾನ್ನಭೋಜನ ನೀಡಿ ತೃಪ್ತಿಗೊಳಿಸಿದನು. ಚಕ್ರವರ್ತಿಯು ಮನಸ್ಸಿನಲ್ಲಿ ಅಸೂಯೆ ಪಡತೊಡಗಿದನು. ʼಈ ತಪಸ್ವಿಯು ತನ್ನ ಐಶ್ವರ್ಯವನ್ನು ಮೀರಿಸಿದನಲ್ಲʼ ಎಂದು ಭಾವಿಸಿ ಧೇನುವನ್ನು ತನಗೆ ನೀಡಬೇಕೆಂದು ಕೇಳಿದನು. ಆದರೆ ಮುನಿ ಸಮ್ಮತಿಸಲಿಲ್ಲ. ಅರಸನು ಬಲತ್ಕಾರದಿಂದ ಧೇನುವನ್ನು ಎಳೆದೊಯ್ದನು.
ಈ ಸಮಾಚಾರವು ಪರಶುರಾಮನಿಗೆ ತಿಳಿಯಿತು. ಅವನ ಕೋಪಕ್ಕೆ ಮಿತಿ ಇಲ್ಲದಂತಾಯಿತು. ಧನುರ್ ಬಾಣಗಳನ್ನ ಹೆಗಲಿಗೆ ಹಾಕಿದನು. ಕುಠಾರವನ್ನು ಹಿಡಿದುಕೊಂಡನು. ಆನೆಗಳ ಗುಂಪನ್ನು ಸಿಂಹವು ಎದುರಿಸುವಂತೆ ಮಾಹಿಷ್ಮತಿಗೆ ಹೋಗಿ ಕಾರ್ತಾವೀರ್ಯನ ಸಾವಿರ ತೋಳುಗಳನ್ನ ತರಿದು ಅವನ ಸೇನೆಯನ್ನು ದ್ವಂಸಗೊಳಿಸಿದನು. ಆದರೆ ಅವನ ಮಕ್ಕಳು ಫಲಾಯನ ಮಾಡಿ ತಪ್ಪಿಸಿಕೊಂಡರು. ಆಗ ಪರಶುರಾಮನು ಬೆನ್ನಟ್ಟಿ ಅವರನ್ನು ಮಾತ್ರವಲ್ಲ, ಇಡೀ ಕ್ಷತ್ರಿಯಕುಲವನ್ನು ನಾಶ ಮಾಡಿದನು. “ಪಟ್ಟಾಭಿಷಿಕ್ತನಾದ ರಾಜನ ವಧೆ ಬ್ರಹ್ಮಹತ್ಯಾ ಪಾಪಕ್ಕಿಂತಲೂ ಮಿಗಿಲಾದುದು” ಎಂದು ಗ್ರಹಿಸಿದ ಜಮದಗ್ನಿಯು ಪಾಪ ಕಳೆದುಕೊಳ್ಳುವುದಕ್ಕಾಗಿ ಪರಶುರಾಮನಲ್ಲಿ ಪ್ರಾಯಶ್ಚಿತ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದನು.
ಭೂಮಂಡಲದ ಕ್ಷತ್ರಿಯರ ಸಂಹಾರದ ದೋಷ ಪರಿಹಾರಕ್ಕಾಗಿ ಪರಶುರಾಮನು ಅನೇಕ ಯಜ್ಞಗಳನ್ನ ಮಾಡಿ, ಭೂಮಂಡಲವನ್ನೆಲ್ಲ ಕಶ್ಯಪ ಮುನಿಗೆ ದಾನ ಮಾಡಿದನು. ಆಗ ಮನಿಯು ತನಗೆ ದಾನ ಕೊಟ್ಟ ಭೂಮಿಯಲ್ಲಿ ಪರಶುರಾಮನು ವಾಸಮಾಡಕೂಡದೆಂದು ತಿಳಿಸಿದನು. ಆ ಪರಶುರಾಮನು ಸಮುದ್ರ ರಾಜನಲ್ಲಿ ಭಿನ್ನವಿಸಿ ಸ್ವಲ್ಪ ಭೂಭಾಗವನ್ನು ಕೇಳಿದನು. ಸಮುದ್ರರಾಜನು “ನಿನ್ನ ಕೊಡಲಿಯನ್ನು ಸಮುದ್ರಕ್ಕೆ ಬೀಸಾಡಿ ಬೇಕಾದಷ್ಟು ನೆಲವನ್ನ ಪಡೆದುಕೋ” ಎಂದು ತಿಳಿಸಿದನು. ಪರಶುರಾಮನು ಸಮುದ್ರರಾಜನ ಅಣತಿ ಪ್ರಕಾರ ತನ್ನ ಕೊಡಲಿಯನ್ನು ಗೋಕರ್ಣದಿಂದ ದಕ್ಷಿಣಭಿಮುಖವಾಗಿ ಕನ್ಯಾಕುಮಾರಿಗೆ ಬಿಸಾಕಿದಾಗ ಅಷ್ಟು ಸ್ಥಳದಿಂದ ಸಮುದ್ರದ ನೀರು ಬತ್ತಿಹೋಯಿತು. ಆ ಭೂಭಾಗಕ್ಕೆ “ಭಾರ್ಗವ ಕ್ಷೇತ್ರ”ವೆಂದು ಹೆಸರಾಯಿತು. ಇದನ್ನೇ “ಕೇರಳ” ಎಂದು ಕರೆಯಲಾಯಿತು.