ಮೈಸೂರು : ಈ ಬಾರಿ ರಾಜ್ಯದಲ್ಲಿ ಉತ್ತಮವಾಗಿ ಮಳೆ ಆಗಿದ್ದು ಡಿಸೆಂಬರ್ 7 ಹಾಗೂ 8 ರಂದು ಚುಂಚನಕಟ್ಟೆ ಗ್ರಾಮದಲ್ಲಿರುವ ಧನುಷ್ಕೋಟಿ ಕಾವೇರಿ ಜಲಪಾತ ಕಾರ್ಯಕ್ರಮ ಮಾಡಲಾಗುವುದು ಎಂದು ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ ರವಿಶಂಕರ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚುಂಚನಕಟ್ಟೆ ಜಲಪಾತೋತ್ಸವ ಆಚರಣೆ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರ್ಥಪೂರ್ಣವಾಗಿ ಡಿಸೆಂಬರ್ 07 ಹಾಗೂ 08 ರಂದು ಚುಂಚನಕಟ್ಟೆ ಜಲಪಾತೋತ್ಸವ ಹಮ್ಮಿಕೊಳ್ಳಲಾಗುತ್ತಿದ್ದು ಕೆ. ಆರ್ ನಗರದಿಂದ ಚುಂಚನಕಟ್ಟೆ ಮಾರ್ಗದಲ್ಲಿ ವಿದ್ಯುತ್ ಅಲಂಕಾರ ಮಾಡಬೇಕು. ಹೆಸರಾಂತ ಕಲಾವಿದರಿಂದ ರಸಸಂಜೆ, ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಏರ್ಪಡಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಆವರಣದಲ್ಲಿ ವಸ್ತು ಪ್ರದರ್ಶನ ಹಾಗೂ ವಿವಿಧ ಮಳಿಗೆಗಳನ್ನು ತೆರೆಯಬೇಕು. ಜಲಪಾತೋತ್ಸವ ಸಂಬಂಧ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಹೆಲ್ತ್ ಕ್ಯಾಂಪ್ ಮಾಡಿ ಬರುವ ಪ್ರವಾಸಿಗರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಬೇಕು.
ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ಉತ್ತಮ ವೇದಿಕೆ ವ್ಯವಸ್ಥೆ ಮಾಡಬೇಕು. ರಸ್ತೆ ಪಾಟ್ ಹೋಲ್ ಗಳನ್ನು ಮುಚ್ಚುವ ವ್ಯವಸ್ಥೆ ಮಾಡಬೇಕು. ಆವರಣದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಬರುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಕಲಾವಿದರನ್ನು ಗುರುತಿಸಿ ಕರೆಸಲು ಕ್ರಮ ವಹಿಸಲಾಗುವುದು. ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳಾದ ಕೆ ಎಂ ಗಾಯತ್ರಿ, ಹುಣಸೂರು ಉಪ ವಿಭಾಗಾಧಿಕಾರಿಗಳಾದ ವಿಜಯ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ . ಡಿ ಎಂ ಸುದರ್ಶನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ ಕೆ ಹರೀಶ್, ಪ್ರವಾಸೋಧ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಭುಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.