ಮಂಗಳೂರು: ಬಹುನಿರೀಕ್ಷಿತ “ಸರ್ಕಸ್” ತುಳು ಸಿನಿಮಾ ಜೂನ್ 23 ರಂದು ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಬಿಗ್ ಬಾಸ್ ಒಟಿಟಿ ಹಾಗೂ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಳಿಕ ಮಾತಾಡಿದ ಯಶ್ ಶೆಟ್ಟಿ ಅವರು, “ಸರ್ಕಸ್ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಬರುತ್ತಿದ್ದೇನೆ. ತುಳು ರಂಗಭೂಮಿಯ ಹಿರಿಯ ಕಲಾವಿದರ ಜೊತೆ ನಟಿಸಿರುವುದು ತುಂಬಾ ಖುಷಿ ಕೊಟ್ಟಿದೆ. ಬಾಲ್ಯದಲ್ಲಿ ಅವರ ನಾಟಕಗಳನ್ನು ನೋಡಲು ಕಿಮೀಗಟ್ಟಲೆ ನಡೆಯುತ್ತಿದ್ದೆ, ಇಂದು ಅವರ ಜೊತೆ ನಟಿಸಿದ್ದೇನೆ” ಎಂದರು.
ಕುಸೇಲ್ದರಸೆ ನವೀನ್ ಡಿ. ಪಡೀಲ್ ಮಾತನಾಡಿ, “ಸರ್ಕಸ್ ತುಳು ಚಿತ್ರದಲ್ಲಿ ಹಾಸ್ಯಕ್ಕೆ ಬಹಳಷ್ಟು ಪ್ರಾಧಾನ್ಯತೆಯಿದೆ. ಇದು ತುಳುನಾಡು ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಸದ್ದು ಮಾಡಲಿದೆ. ರೂಪೇಶ್ ಶೆಟ್ಟಿ ಅವರು ಈ ಚಿತ್ರದಲ್ಲಿ ಕಷ್ಟಪಟ್ಟು ದುಡಿದಿದ್ದಾರೆ. ಅವರ ಶ್ರಮ ಸಾರ್ಥಕವಾಗಲು ನೀವೆಲ್ಲರೂ ಸಿನಿಮಾ ನೋಡಬೇಕು” ಎಂದರು.
ಅರವಿಂದ್ ಬೋಳಾರ್ ಮಾತಾಡುತ್ತಾ, “ಸರ್ಕಸ್ ಸಿನಿಮಾದಲ್ಲಿ ಹಾಸ್ಯದ ಜೊತೆ ಫ್ಯಾಮಿಲಿ ಕುಳಿತು ನೋಡುವಂತಹ ಚಂದದ ಕಥೆಯಿದೆ. ಎಲ್ಲರೂ ಸಿನಿಮಾ ಥಿಯೇಟರ್ ಬಂದು ನೋಡಿ ಸಿನಿಮಾವನ್ನು ಗೆಲ್ಲಿಸಿ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ಅತ್ತಾವರ, ರೂಪೇಶ್ ಶೆಟ್ಟಿ, ಯಶ್ ಶೆಟ್ಟಿ, ರಚನಾ ರೈ, ಅರವಿಂದ್ ಬೋಳಾರ್, ನವೀನ್ ಡಿ. ಪಡೀಲ್, ಪ್ರಸನ್ನ ಶೆಟ್ಟಿ ಬೈಲೂರು, ಸಿನಿಮಾ ಹಂಚಿಕೆದಾರ ಸಚಿನ್ ಎ. ಎಸ್. ಉಪ್ಪಿನಂಗಡಿ, ಲೋಯ್ ಸಲ್ದಾನ, ನವೀನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ದೇಶ ವಿದೇಶಗಳಲ್ಲಿ 51 ಪ್ರೀಮಿಯರ್ ಶೋ! :
ಸರ್ಕಸ್ ಸಿನಿಮಾ ಈಗಾಗಲೇ ಬಿಡುಗಡೆಗೆ ಮುನ್ನವೇ ದೇಶ ವಿದೇಶಗಳಲ್ಲಿ 51 ಪ್ರೀಮಿಯರ್ ಶೋಗಳನ್ನು ಮಾಡಲಾಗಿದೆ. ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು ಸಿನಿಮಾ ಏಕಕಾಲದಲ್ಲಿ ವಿದೇಶದಲ್ಲೂ ಬಿಡುಗಡೆಯಾಗಲಿದೆ.
ತುಳು ಸಿನಿಮಾರಂಗದಲ್ಲಿ ಅತೀ ದೊಡ್ಡ ಹಿಟ್ ಚಿತ್ರ ‘ಗಿರಿಗಿಟ್’ ಸಿನಿಮಾ ಭರ್ಜರಿ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ನಿರ್ದೇಶನದ 2ನೇ ಚಿತ್ರ ಸರ್ಕಸ್. ಗಿರಿಗಿಟ್ ಗೆ ಸಂಭಾಷಣೆ ಬರೆದ ಪ್ರಸನ್ನ ಶೆಟ್ಟಿ ಬೈಲೂರು ಈ ಸಿನಿಮಾಕ್ಕೂ ಸಂಭಾಷಣೆ ಬರೆದಿದ್ದಾರೆ.
“ಸಲಗ” ಖ್ಯಾತಿಯ ಯಶ್ ಶೆಟ್ಟಿ ಸರ್ಕಸ್ ಮೂಲಕ ತುಳು ಚಿತ್ರರಂಗಕ್ಕೆ ಪರಿಚಯ ಆಗುತ್ತಿದ್ದಾರೆ. ಅದೇ ರೀತಿ ರಚನಾ ರೈ ಎಂಬ ನಟಿಯನ್ನು ತುಳು ಸಿನಿಮಾ ರಂಗಕ್ಕೆ ಪರಿಚಯಿಸಲಾಗಿದೆ.
‘ಗಿರಿಗಿಟ್’ ತುಳು ಚಿತ್ರಗಳ ಪೈಕಿ ಅತ್ಯಂತ ಯಶಸ್ವಿಯಾದ ಹಾಸ್ಯಮಯ ಚಿತ್ರ. ಹಲವು ದೇಶಗಳಲ್ಲಿ ಗಿರಿಗಿಟ್ ಬಿಡುಗಡೆ ಗೊಂಡು ಭರ್ಜರಿ ಪ್ರದರ್ಶನ ಕಂಡಿದೆ. ಈಗ ಅದೇ ತಂಡ ‘ಸರ್ಕಸ್’ ಸಿನಿಮಾ ಮಾಡಿದೆ.
ತುಳು ಚಿತ್ರಗಳ ಸಾಮಾನ್ಯ ಕಾನ್ಸೆಪ್ಟ್ ಹಾಸ್ಯ ಆಗಿದ್ದು ‘ಸರ್ಕಸ್’ನಲ್ಲೂ ಅದೇ ಪ್ರಧಾನ ವಸ್ತು. ತುಳು ಚಿತ್ರರಂಗದ ಘಟಾನುಘಟಿ ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ್, ಪ್ರದೀಪ್ ಆಳ್ವ, ನಿತೇಶ್ ಶೆಟ್ಟಿ ಎಕ್ಕಾರ್, ರೂಪಾ ವರ್ಕಾಡಿ, ಪಂಚಮಿ ಭೋಜರಾಜ್ ತಾರಾಗಣದಲ್ಲಿದ್ದಾರೆ.
ಶೋವಿನ್ ಫಿಲಂಸ್, ಮುಗ್ರೋಡಿ ಫಿಲಂಸ್ ಲಾಂಛನದಡಿಯಲ್ಲಿ ಸರ್ಕಸ್ ಸಿನಿಮಾ ತಯಾರಾಗಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮಂಜುನಾಥ ಅತ್ತಾವರ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕರಾವಳಿಯ ಸುತ್ತಮುತ್ತ ಚಿತ್ರೀಕರಣ ನಡೆದಿದೆ.
ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು, ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ನಿರಂಜನ ದಾಸ್ ಕ್ಯಾಮರಾ, ರಾಹುಲ್ ವಶಿಷ್ಠ ಸಂಕಲನ, ಲೋಯ್ ಸಲ್ದಾನ ಅವರ ಸಂಗೀತ ಈ ಚಿತ್ರಕ್ಕಿದೆ.