ಬೆಂಗಳೂರು: ಅಸ್ಸಾಂ ಒಪ್ಪಂದದ ಪ್ರಕಾರ ವಲಸಿಗರಿಗೆ ಪೌರತ್ವ ನೀಡುವ 1955ರ ಪೌರತ್ವ ಕಾಯ್ದೆಯ ಸೆಕ್ಷನ್ 6A ದ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಈ ಸೆಕ್ಷನ್ ನಡಿ 1966 ಜನವರಿ 1 ಹಾಗೂ 1971 ಮಾರ್ಚ್ 25ರ ನಡುವೆ ಅಸ್ಸಾಂಗೆ ಪ್ರವೇಶಿಸಿದ ವಲಸಿಗರಿಗೆ ಭಾರತದ ಪೌರತ್ವ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳುತ್ತದೆ.
ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸೂರ್ಯಕಾಂತ, ಎಂ.ಎಂ ಸುಂದರೇಶ್, ಜೆ.ಬಿ. ಪಾರ್ದೀವಾಲ ಹಾಗೂ ಮನೋಜ್ ಮಿಶ್ರಾ ಅವರಿದ್ದ ಸಾಂವಿಧಾನಿಕ ಪೀಠ 4:1ರ ಬಹುಮತದಲ್ಲಿ ಗುರುವಾರ ತೀರ್ಪು ಪ್ರಕಟಿಸಿತು.
ನ್ಯಾಯಮೂರ್ತಿ ಪಾರ್ದೀವಾಲ ಅವರು ಭಿನ್ನ ತೀರ್ಪು ನೀಡಿದರು. ಈ ಸೆಕ್ಷನ್ ಅಸಂವಿಧಾನಿಕ ಎಂದು ಅವರು ತೀರ್ಪಿನಲ್ಲಿ ಹೇಳಿದ್ದಾರೆ.
ಅಸ್ಸಾಂ ಒಪ್ಪಂದವು ಅನಧಿಕೃತ ವಲಸೆ ಸಮಸ್ಯೆಗೆ ರಾಜಕೀಯ ಪರಿಹಾರವಾಗಿತ್ತು. ಸೆಕ್ಷನ್ 6A ಶಾಸನಾತ್ಮಕ ಪರಿಹಾರವಾಗಿದೆ’ ಎಂದು ಸಿಜೆಐ ಚಂದ್ರಚೂಡ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಅಸ್ಸಾಂನಲ್ಲಿ ಸ್ಥಳೀಯ ಜನಸಂಖ್ಯೆಯಲ್ಲಿ ವಲಸಿಗರ ಪ್ರಮಾಣವು ಇತರ ಗಡಿ ರಾಜ್ಯಗಳಿಗಿಂತ ಹೆಚ್ಚಾಗಿದೆ. ಹೀಗಾಗಿ ಬಾಂಗ್ಲಾದೇಶದೊಂದಿಗೆ ಹೆಚ್ಚಿನ ಗಡಿಯನ್ನು ಹಂಚಿಕೊಂಡಿರುವ ಇತರ ರಾಜ್ಯಗಳಿಗಿಂತ ಅಸ್ಸಾಂ ಅನ್ನು ಪ್ರತ್ಯೇಕಿಸುವುದು ವಿವೇಕಯುತವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಬಾಂಗ್ಲಾದೇಶ ವಿಮೋಚನಾ ಯುದ್ಧ ಕೊನೆಗೊಂಡ ದಿನವಾಗಿರುವುದರಿಂದ 1971ರ ಮಾರ್ಚ್ 25ಅನ್ನು ಕೊನೆಯ ದಿನಾಂಕ ಎಂದು ನಿಗದಿಪಡಿಸಿರುವುದು ಕೂಡ ತಾರ್ಕಿಕವಾಗಿದೆ ಎಂದು ಬಹುಮತದ ತೀರ್ಪು ನೀಡಿದ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.