ಬೆಂಗಳೂರು(Bengaluru): ಇದೇ ಮೊದಲ ಬಾರಿಗೆ ಪೌರಕಾರ್ಮಿಕರು ಯಲಹಂಕದಲ್ಲಿ ಸ್ವಾತಂತ್ರ್ಯೋತ್ಸವದ ಪಥ ಸಂಚಲನದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಯಲಹಂಕದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನೂರಾರು ಪೌರಕಾರ್ಮಿಕರು ಶಿಸ್ತು ಬದ್ಧವಾಗಿ ಪಥಸಂಚಲನ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಪ್ರತಿ ದಿನ ನಗರವನ್ನು ಸ್ವಚ್ಛವಾಗಿರುವ ಕಾರ್ಯದಲ್ಲಿ ಮಗ್ನರಾಗುವ ಈ ಪೌರ ಕಾರ್ಮಿಕರು ಸ್ವಾತಂತ್ರ್ಯ ದಿನದಂದು ಸಾವಿರಾರು ನಾಗರಿಕರ ಸಮ್ಮುಖದಲ್ಲಿ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಬಿಡಿಎ ಅಧ್ಯಕ್ಷರೂ ಆಗಿರುವ ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಇದೇ ಮೊದಲ ಬಾರಿಗೆ ಪೌರಕಾರ್ಮಿಕರಿಗೂ ಪಥ ಸಂಚಲನದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟು ಅವರಿಗೆ ಗೌರವ ದೊರೆಯುವಂತೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಶ್ವನಾಥ್ ಅವರು, ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿಟ್ಟು ಅಂದವಾಗಿ ಕಾಣುವಂತೆ ಮಾಡುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಅಂತಹ ಕಾಯಕಯೋಗಿಗಳಿಗೆ ಪಥ ಸಂಚಲನದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ತಮಗೆ ಈ ಗೌರವ ಸಿಕ್ಕಿದ್ದರ ಬಗ್ಗೆ ಹರ್ಷ ವ್ಯಕ್ತಪಡಿಸಿದ ಪೌರಕಾರ್ಮಿಕರಾದ ಗೌರಮ್ಮ, ನಾವು ಕಸ ಗುಡಿಸಿ ರಸ್ತೆಗಳನ್ನು ಸ್ವಚ್ಛಗೊಳಿಸುತ್ತೇವೆ. ನಮಗೆ ಈ ಕೆಲಸ ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ಆದರೆ ಶಾಸಕರು ನಮಗೆ ದೊಡ್ಡ ಗ್ರೌಂಡಿನಲ್ಲಿ ಸಾವಿರಾರು ಜನರ ಎದುರು ಪಥಸಂಚಲನ ಮಾಡಲು ಮಾಡಲು ಅವಕಾಶ ಕೊಟ್ಟಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಅಧಿಕಾರಿಗಳಿಗೆ ಡ್ರೆಸ್ ಕೋಡ್
ಇನ್ನು, ಸ್ವಾತಂತ್ರ್ಯ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಬಿಳಿ ಪಂಚೆ ಮತ್ತು ಶರ್ಟ್ ಧರಿಸಿ ಸಾಂಪ್ರದಾಯಿಕ ಸಂಸ್ಕೃತಿಯನ್ನು ಬಿಂಬಿಸುವಂತೆ ಮಾಡಲಾಯಿತು.
ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಬಿಳಿ ವಸ್ತ್ರಧಾರಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.
ಧ್ವಜಾರೋಹಣ ನೆರವೇರಿಸಿದ ಶಾಸಕರಾದ ವಿಶ್ವನಾಥ್ ಅವರು ಸಹ ಶ್ವೇತ ವಸ್ತ್ರಧಾರಿಯಾಗಿ ಆಗಮಿಸಿ ಎಲ್ಲರಿಗೂ ಮಾದರಿಯಾದರು.