ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಪತ್ನಿ ಶಿವಮಾಲಾ ಅವರ ಜೊತೆಗೂಡಿ ಎರಡು ದಿನ ಮೈಸೂರು ಮತ್ತು ಗಡಿ ಜಿಲ್ಲೆ ಚಾಮರಾಜನಗರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದ ಅವರು ಪೂಜೆ-ಪುನಸ್ಕಾರ ನೆರವೇರಿಸಿದರು.
ಸುಪ್ರೀಂ ಕೋರ್ಟ್‌ಗೆ ಬೇಸಿಗೆ ರಜೆ ಇರುವ ಹಿನ್ನೆಲೆಯಲ್ಲಿ ಸಿಜೆಐ ರಮಣ ಅವರು ಪತ್ನಿ ಸಮೇತ ವಿವಿಧ ಸ್ಥಳಗಳಿಗೆ ಖಾಸಗಿ ಭೇಟಿ ನೀಡಿದ್ದರು. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಸೋಮವಾರ ಭೇಟಿ ನೀಡಿದ್ದ ನ್ಯಾ. ರಮಣ ದಂಪತಿಯು ಬಳಿಕ ರಸ್ತೆ ಮಾರ್ಗವಾಗಿ ಚಾಮರಾಜನಗರ ಜಿಲ್ಲೆಯ ಹರಳುಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಆನಂತರ ಅಧ್ಯಾತ್ಮ ಗುರು, ಜ್ಯೋತಿಷಿ ಹಾಗೂ ಉದ್ಯಮಿ ವಿಜಯಕುಮಾರ್ ಅವರ ಮನೆಯಲ್ಲಿ ಭೋಜನ ಸವಿದರು.ಆನಂತರ ಚಾಮರಾಜನಗರದಲ್ಲಿರುವ ದೀನಬಂಧು ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಸ್ವಲ್ಪ ಹೊತ್ತು ಕಳೆದರು. ಸೋಮವಾರ ಬಂಡೀಪುರದ ಸರಾಯಿ ರೆಸಾರ್ಟ್‌ನಲ್ಲಿ ತಂಗಿದ್ದ ದಂಪತಿ, ಸಫಾರಿಯಲ್ಲೂ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯವರ ಕೋರಿಕೆಯ ಮೇರೆಗೆ ತಮ್ಮ ಭೇಟಿಯ ಸ್ಮರಣಾರ್ಥ ಗಿಡನೆಟ್ಟರು. ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಆತಿಥ್ಯ ಸ್ವೀಕರಿಸಿದರು. ಬಳಿಕ, ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.