ಮನೆ ರಾಜ್ಯ ವರುಣಾದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

ವರುಣಾದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

0

ಮೈಸೂರು: ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ಕೆಲವು ಕಾರ್ಯಕರ್ತರ ನಡುವೆ ಗುರುವಾರ ಗಲಾಟೆ ನಡೆದಿದೆ.

Join Our Whatsapp Group

ಗಲಾಟೆಯಲ್ಲಿ ಬಿಜೆಪಿ ಕಾರ್ಯಕರ್ತ ಕೆ.ಎಂ.ನಾಗೇಶ್ ಗಾಯಗೊಂಡಿದ್ದು, ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿದ್ದರಾಮಯ್ಯ ಅವರ ಅಣ್ಣನ ಮನೆ ಮುಂದೆ ಘಟನೆ ನಡೆದಿದೆ ಎನ್ನಲಾಗಿದ್ದು, ಗಲಾಟೆ ಮಾಡಿದವರಲ್ಲಿ ಒಬ್ಬರು ಸಿದ್ದರಾಮಯ್ಯನವರ ಸಂಬಂಧಿ ಎಂದು ಆರೋಪಿಸಲಾಗಿದೆ.

ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರಿದ್ದ ವಾಹನ ಸಿದ್ದರಾಮಯ್ಯ ಅವರ ಅಣ್ಣನ ಮನೆ ಸಮೀಪ ಬರುತ್ತಿದ್ದಂತೆ ಕಾಂಗ್ರೆಸ್‌ ಬೆಂಬಲಿತ ಯುವಕರ ಗುಂಪೊಂದು ಸಿದ್ದರಾಮಯ್ಯ ಪರ ಘೋಷಣೆ ಕೂಗಿತ್ತು. ಮತ್ತೊಂದು ಗುಂಪು ಸೋಮಣ್ಣ ಪರ ಘೋಷಣೆ ಕೂಗಿತ್ತು. ಆಗ, ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಕೆಲವರು ನಾಗೇಶ್ ಮೇಲೆ ಹಲ್ಲೆ ಮಾಡಿದರು. ಪೊಲೀಸರು ಎರಡೂ ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ತಿಳಿಯಾಗಿಸಿದರು. ನಂತರ ಪೊಲೀಸ್ ಬಂದೋಬಸ್ತ್’ನಲ್ಲಿ ಬಿಜೆಪಿ ಪ್ರಚಾರ ವಾಹನ ಸಾಗಿತು ಎಂದು ತಿಳಿದುಬಂದಿದೆ.

ಪೊಲೀಸರ ಮುಂದೆಯೇ ಸಿದ್ದರಾಮಯ್ಯ ಬೆಂಬಲಿಗರು ಗಲಾಟೆ ಮಾಡಿದರು. ನನ್ನ ಅಣ್ಣನ ಮಗ ನಾಗೇಶ್ ಕಾಲಿಗೆ ಗಾಯವಾಗಿದ್ದು, ಮೂವರು ಆರೋಪಿಗಳನ್ನು ವರುಣ ಪೊಲೀಸರು ವಶಕ್ಕೆ ಪಡೆದು, ಬಿಡುಗಡೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ರವಿಶಂಕರ್ ದೂರಿದರು.

ಇದಕ್ಕೂ ಮುನ್ನ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪ್ರತಾಪ ಸಿಂಹ, ಈ ಬಾರಿ ಸಿದ್ದರಾಮನಹುಂಡಿಯಲ್ಲೂ ಬಿಜೆಪಿಗೆ ಲೀಡ್ ಬರಬೇಕು. ಇಲ್ಲಿಯೂ ಜನ ನರೇಂದ್ರ ಮೋದಿ ಜೊತೆಗಿದ್ದಾರೆಂದು ಸಾಬೀತುಪಡಿಸಬೇಕು ಎಂದರು.

ಹನುಮ ಯಾವಾಗ, ಎಲ್ಲಿ ಹುಟ್ಟಿದ ಎಂದು ಕೇಳಿದವರಿಗೆ ಇಲ್ಲಿ ಸ್ಥಾನವಿರಬಾರದು. ನಮ್ಮ ಕಾರ್ಯಕರ್ತರು ಮತ ಕೇಳಲು ಬಂದಾಗ ತಡೆಯುವುದು ಸರಿಯಲ್ಲ. ನಾವೂ ಮನಸ್ಸು ಮಾಡಿದರೆ ಪ್ರತಿ ಊರಲ್ಲೂ ಪ್ರಚಾರ ಮಾಡದಂತೆ ಕಾಂಗ್ರೆಸ್‌’ನವರನ್ನು ತಡೆಯುತ್ತೇವೆ. ಆದರೆ, ನಾವು ಪ್ರಜಾತಂತ್ರದಲ್ಲಿ ನಂಬಿಕೆ ಇಟ್ಟಿದ್ದೇವೆ. ಒಬ್ಬನೇ ಬರುತ್ತೇನೆ. ಅದೇನು ಪುಂಡಾಟಿಕೆ ಮಾಡುತ್ತೀರೋ ನೋಡುವೆ ಎಂದು ಸವಾಲು ಹಾಕಿದರು.

ಎಸ್ಪಿ ಸೀಮಾ ಲಾಟ್ಕರ್, ನಾಗೇಶ್ ಎನ್ನುವವರಿಗೆ ರವಿ ಎನ್ನುವವರ ವಾಹನ ಡಿಕ್ಕಿಯಾಗಿದೆ ಎಂಬ ಮಾಹಿತಿ ಬ೦ದಿದೆ. ಬೇರಾವುದೇ ಗಲಾಟೆಯಾಗಿಲ್ಲ. ಕಲ್ಲು ತೂರಾಟವೇನೂ ಆಗಿಲ್ಲ. ನಮ್ಮ ಸಿಬ್ಬಂದಿ ಅಲ್ಲಿದ್ದರು ಎಂದರು.