ಚಿಕ್ಕಮಗಳೂರು : ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಕಾಂಗ್ರೆಸ್ ಗ್ರಾಮ ಪಂಚಾಯತ್ ಸದಸ್ಯ ಮೃತಪಟ್ಟ ಘಟನೆ ಕಡೂರು ತಾಲೂಕಿನ ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ಚರ ಮಠದ ಬಳಿ ನಡೆದಿದೆ.
ಗಣೇಶ್ ಗೌಡ (38) ಮೃತ ದುರ್ದೈವಿ. ಗಣೇಶ್ ಮುಂದೆ ಬರಲಿರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಖರಾಯಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಕೊಲೆಗೂ ಮುನ್ನ ಶುಕ್ರವಾರ ರಾತ್ರಿ 10:30ರ ವೇಳೆ ಸಖರಾಯಪಟ್ಟಣ ಬಾರ್ ಬಳಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಬಾರ್ ಬಳಿ ಗಲಾಟೆ ನಡೆದ ಅರ್ಧ ಗಂಟೆ ನಂತರ ಮಠದ ಬಳಿ ಮತ್ತೆ ಗಲಾಟೆ ನಡೆದಿದೆ.
ಈ ಗಲಾಟೆ ವಿಕೋಪಕ್ಕೆ ಹೋಗಿ ಮಚ್ಚಿನಿಂದ ಗಣೇಶ್ ಮೇಲೆ ಹಲ್ಲೆ ನಡೆದು ಹತ್ಯೆ ಮಾಡಲಾಗಿದೆ. ಎದುರಾಳಿ ಗುಂಪಿನ ಇಬ್ಬರ ತಲೆಗೂ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಬಳಿ ಎಸ್‌ಪಿ ವಿಕ್ರಮ್ ಆಮ್ಟೆ ಪ್ರತಿಕ್ರಿಯಿಸಿ, ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿದೆ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಗಲಾಟೆಯಲ್ಲಿ ಭಾಗಿಯಾದ ಇಬ್ಬರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಸಖರಾಯಪಟ್ಟಣ ವ್ಯಾಪ್ತಿಯಲ್ಲಿ ಸೂಕ್ತ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.














