ಕುಣಿಗಲ್ : ಅಂಗಡಿ ಮಳಿಗೆ ಮುಂಭಾಗ ಮಣ್ಣು ಹಾಕುವ ವಿಚಾರ ಸಂಬಂಧ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು 10 ಮಂದಿ ಗಾಯಗೊಂಡಿರುವ ಘಟನೆ ಪಟ್ಟಣದ ಮದ್ದೂರು ರಸ್ತೆ ಈದ್ಗಾ ಮೈದಾನ ಕಾಂಪ್ಲೆಕ್ಸ್ ಬಳಿ ನಡೆದಿದೆ.
ಪಟ್ಟಣದ ಟಿ.ಎಂ ರಸ್ತೆ ರಾಜ್ಯ ಹೆದ್ದಾರಿ 33 ರ ಈದ್ಗಾ ಮೈದಾನದಲ್ಲಿ ಈ ಹಿಂದೆ ನಿರ್ಮಿಸಲಾದ ಅಂಗಡಿ ಮಳಿಗೆಗಳು ಶಿಥಿಲಗೊಂಡ ಕಾರಣ ವಕ್ಫ್ ಬೋರ್ಡ್ ನಿಂದ ಹೊಸದಾಗಿ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಲಾಯಿತು. ಆದರೆ ಹಳೇ ಅಂಗಡಿ ಮಳಿಗೆಯ ಕೆಲ ಬಾಡಿಗೆದಾರರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ, ಕೆಲ ಅಂಗಡಿ ಬಾಡಿಗೆದಾರರು ನ್ಯಾಯಾಲಯದ ಮೆಟ್ಟಿಲು ಏರಿದ ಕಾರಣ ಆ ಅಂಗಡಿಗಳನ್ನು ಹೊರತು ಪಡಿಸಿ ಹೊಸದಾಗಿ ಅಂಗಡಿಗಳನ್ನು ನಿರ್ಮಾಣ ಮಾಡಲಾಗಿತ್ತು. ಹಳೇ ಅಂಗಡಿಗಳಲ್ಲೇ ಬಾಡಿಗೆದಾರರು ವ್ಯಾಪಾರ ವಹಿವಾಟು ಮಾಡಿಕೊಂಡು ಇದ್ದಾರೆ ಈ ಸಂಬಂಧ ಹಲವು ಭಾರಿ ಹಳೇ ಅಂಗಡಿ ಬಾಡಿಗೆದಾರರ ಮತ್ತು ಸೂರಾ ಕಮಿಟಿ ಆಡಳಿತ ನಡುವೆ ಗಲಾಟೆ ನಡೆದಿತ್ತು.
ಆದರೆ ಶುಕ್ರವಾರ ರಾತ್ರಿ ಅಂಗಡಿ ಮುಂಭಾಗ ಬಾಡಿಗೆದಾರರು ಮಣ್ಣು ಹಾಕುತ್ತಿದ್ದರು. ಇದಕ್ಕೆ ಸೂರಾ ಕಮಿಟಿ ಆಡಳಿತ ಅಕ್ಷೇಪ ವ್ಯಕ್ತಪಡಿಸಿತ್ತು ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ಯಾವುದೇ ಕೆಲಸ ಇಲ್ಲಿ ಮಾಡಬಾರದೆಂದು ಸಮಿತಿಯ ಪದಾಧಿಕಾರಿಗಳು ವಾದಿಸಿದರು ಈ ನಡುವೆ ಎರಡು ಗುಂಪುಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಪರಸ್ಪರ ಬಡಿದಾಡಿಕೊಂಡರು.
ಈ ಘಟನೆಯಲ್ಲಿ ಎರಡು ಗುಂಪಿನ ಕಡೆಯವರು ಗಾಯಗೊಂಡು ಕೆಲ ಗಾಯಾಳುಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದರೆ ತೀವ್ರವಾಗಿ ಗಾಯಗೊಂಡ ಗಾಯಾಳುಗಳನ್ನು ಬೆಂಗಳೂರು ಆಸ್ಪತ್ರೆ ಗೆ ಕಳಿಸಿಕೊಡಲಾಗಿದೆ.