ಮನೆ ಕಾನೂನು ಸಿಎಲ್ಎಟಿ 2025: ಎಲ್ಲಾ ಪ್ರಕರಣಗಳನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

ಸಿಎಲ್ಎಟಿ 2025: ಎಲ್ಲಾ ಪ್ರಕರಣಗಳನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

0

ಪದವಿ ಕೋರ್ಸ್‌ಗಳ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಪದವಿ ಸಿಎಲ್‌ಎಟಿ) 2025ರ ಫಲಿತಾಂಶಗಳಿಗೆ ಸಂಬಂಧಿಸಿದಂತೆ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.

Join Our Whatsapp Group

“ಮಾರ್ಚ್ 3 ರಂದು ದೆಹಲಿ ಹೈಕೋರ್ಟ್ ಮುಂದೆ ಪ್ರಕರಣ ಪಟ್ಟಿ ಮಾಡಿ. ಈ ಆದೇಶ ಪ್ರಕಟವಾದ 7 ದಿನಗಳಲ್ಲಿ ಪ್ರತಿ ಹೈಕೋರ್ಟ್‌ನ ರಿಜಿಸ್ಟ್ರಾರ್ (ತಮ್ಮ ಮುಂದೆ ಬಾಕಿ ಇರುವ ಸಂಬಂಧಿತ ಪ್ರಕರಣದ) ದಾಖಲೆಗಳನ್ನು ದೆಹಲಿ ಹೈಕೋರ್ಟ್‌ಗೆ ಕಳುಹಿಸಬೇಕು” ಎಂದು ಸಿಜೆಐ ಸಂಜೀವ್ ಖನ್ನಾ ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಹಾಗೂ ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿದೆ.

ಒಂದೇ ಪ್ರಕರಣದ ಬಗ್ಗೆ ವ್ಯತಿರಿಕ್ತ ತೀರ್ಪು ಪ್ರಕಟವಾಗುವುದನ್ನು ತಪ್ಪಿಸಲು ಎಲ್ಲಾ ಪ್ರಕರಣಗಳನ್ನೂ ಒಂದೇ ಹೈಕೋರ್ಟ್‌ಗೆ ವರ್ಗಾಯಿಸಲು ಎನ್‌ಎಲ್‌ಯು ಒಕ್ಕೂಟ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಪರೀಕ್ಷೆಗೆ ಸಂಬಂಧಿಸಿದಂತೆ ದೆಹಲಿ , ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಲಾಗಿತ್ತು.

ಪ್ರಶ್ನೆಪತ್ರಿಕೆಗಳ ಕೆಲ ದೋಷಗಳ ಕುರಿತು ಕುರಿತು 17 ವರ್ಷದ ಸಿಎಲ್ಎಟಿ ಅಭ್ಯರ್ಥಿ ಆದಿತ್ಯ ಸಿಂಗ್‌ ಸಲ್ಲಿಸಿದ್ದ ಅರ್ಜಿಯನ್ನು ಡಿಸೆಂಬರ್ 20 ರಂದು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿತ್ತು.

ಸಿಎಲ್‌ಎಟಿ ಅಭ್ಯರ್ಥಿ ಕೇಳಿದ ಐದು ಪ್ರಶ್ನೆಗಳಲ್ಲಿ ಎರಡರಲ್ಲಿ ಸ್ಪಷ್ಟ ದೋಷಗಳಿವೆ ಎಂದು ನ್ಯಾ. ಸಿಂಗ್ ತೀರ್ಮಾನಿಸಿದ್ದರು. ಆದ್ದರಿಂದ ಪರಿಷ್ಕೃತ ಫಲಿತಾಂಶ ಪ್ರಕಟಿಸುವಂತೆ ಎನ್‌ಎಲ್‌ಯುಗಳ ಒಕ್ಕೂಟಕ್ಕೆ ನಿರ್ದೇಶಿಸಿದ್ದರು.

ಆದರೆ ಏಕಸದಸ್ಯ ಪೀಠ ತಜ್ಞರ ಪಾತ್ರ ನಿರ್ವಹಿಸಿದ್ದು ಫಲಿತಾಂಶದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಎನ್‌ಎಲ್‌ಯುಗಳ ಒಕ್ಕೂಟ ಹಾಗೂ ಐದು ಪ್ರಶ್ನೆಗಳ ಉತ್ತರಗಳು ತಪ್ಪಾಗಿವೆ ಎಂದು ಆಕ್ಷೇಪಿಸಿ ಆದಿತ್ಯ ಇಬ್ಬರೂ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪದವಿ ಪ್ರವೇಶಾತಿ ಪರೀಕ್ಷೆ ಮಾತ್ರವಲ್ಲದೆ ಸಿಎಲ್‌ಎಟಿ ಪಿಜಿ ಪರೀಕ್ಷೆಗಳ ಉತ್ತರಗಳಲ್ಲೂ ದೋಷ ಕಂಡುಬಂದಿದ್ದು ವಿವಾದಕ್ಕೆ ಸಿಲುಕಿತ್ತು. ಸ್ನಾತಕೋತ್ತರ ಪರೀಕ್ಷೆಯ ಫಲಿತಾಂಶಗಳನ್ನು ಮಧ್ಯಪ್ರದೇಶ ಹೈಕೋರ್ಟ್ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.