ರಾಯಚೂರು: ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯ ಸಂಕಲ್ಪ ಯಾತ್ರೆಗೆ ಎಲ್ಲ ಕಡೆಯಲ್ಲೂ ದೊಡ್ಡ ಪ್ರಮಾಣದಲ್ಲಿ ಸ್ಪಂದನೆ ಸಿಗುತ್ತಿದೆ. ವಿಜಯ ಸಂಕಲ್ಪ ಯಾತ್ರೆಯಲ್ಲಿ ಯುವಕರು ದೊಡ್ಡಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಧಾನಮಂತ್ರಿ ಯಶಸ್ವಿಯಾಗಿ ಕೋವಿಡ್ ನಿರ್ವಹಣೆ ಮಾಡಿದ್ದನ್ನು ಎಲ್ಲರೂ ನೋಡಿದ್ದಾರೆ. ಭ್ರಷ್ಟಾಚಾರ ರಹಿತವಾದ ಎಂಟು ವರ್ಷಗಳ ಆಡಳಿತ ನೀಡಿದ್ದಾರೆ ಎಂದರು.
ದೇಶ ಆರ್ಥಿಕವಾಗಿ ಚೇತರಿಸಿಕೊಳ್ಳಲು ಮೋದಿ ಕಾರಣರಾಗಿದ್ದಾರೆ. ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಟನ್ ದೇಶವನ್ನು ಭಾರತ ಹಿಂದಿಕ್ಕಿದೆ. ವಿಶ್ವದ ಜನಪ್ರಿಯ ನಾಯಕ ಪ್ರಧಾನಿ ಇದ್ದಾರೆ. ಡಬಲ್ ಎಂಜಿನ್ ಸರ್ಕಾರ ಇರುವುದರಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ ಎಂದು ಹೇಳಿದರು.
ರಾಯಚೂರಿನಲ್ಲಿ ವಿಮಾನ ನಿಲ್ದಾಣ, ಏತ ನೀರಾವರಿ, ವರ್ತುಲ ರಸ್ತೆ, ಭಾರತಮಾಲಾ, ಜವಳಿ ಪಾರ್ಕ್, ಹೊಸ ಕೈಗಾರಿಕಾ ವಲಯ, ರಾಯಚೂರು ಮಹಾನಗರ ಪಾಲಿಕೆ ಆಗಲಿದೆ. ನಂಜುಂಡಪ್ಪ ವರದಿ ಜಾರಿಗಾಗಿ ಸಾವಿರಾರು ಕೋಟಿ ಅನುದಾನ ಕೊಡಲಾಗಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಕಾಂಗ್ರೆಸ್ ಅವಮಾನ, ಅಪಮಾನ ಹಾಗೂ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ನಿರಂತರ ಸೋಲಿನಿಂದ ಕಂಗೆಟ್ಟಿದೆ ಎಂದರು.
ಸಾರಿಗೆ ಸಚಿವ ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ರಘುನಾಥ್ ಮಲ್ಕಾಪುರೆ ಇದ್ದರು.