ಮನೆ ರಾಜ್ಯ ಧರ್ಮಗುರುಗಳು ಪ್ರಚೋದನೆಯ ಹೇಳಿಕೆ ನೀಡಬಾರದು: ಡಾ. ಜಿ ಪರಮೇಶ್ವರ

ಧರ್ಮಗುರುಗಳು ಪ್ರಚೋದನೆಯ ಹೇಳಿಕೆ ನೀಡಬಾರದು: ಡಾ. ಜಿ ಪರಮೇಶ್ವರ

0

ಬೆಂಗಳೂರು: ‘ಮಕ್ಕಳ ಕೈಯಲ್ಲಿ ಪೆನ್ನು ಕೊಡುವ ಬದಲು ತಲ್ವಾರ್ ಕೊಡಿ’ ಎಂದು ಮರುಳಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿರುವ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದು, ಪೊಲೀಸರು ಆ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Join Our Whatsapp Group

ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್, ಧರ್ಮಗುರುಗಳು ಧರ್ಮದಿಂದ ನಡೆದುಕೊಳ್ಳಬೇಕು. ಅವರು ಧರ್ಮ ಪ್ರಚಾರಕರಾಗಿ ಪ್ರಚೋದನೆಯ ಹೇಳಿಕೆಗಳನ್ನು ನೀಡಬಾರದು ಎಂದರು.

ನಾವು ಪೂಜನೀಯ ಭಾವದಿಂದ ಸ್ವಾಮೀಜಿಯವರ ಕಾಲಿಗೆ ಬೀಳುತ್ತೇವೆ. ಆದರೆ, ಅಂಥವರೇ ಯುವಕರ ಕೈಯಲ್ಲಿ ತಲ್ವಾರ್ ಕೊಡಿ ಎಂಬುದು ಸರಿಯಲ್ಲ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.

ಮರುಳಾರಾಧ್ಯ ಶಿವಾಚಾರ್ಯ ಶ್ರೀ ಹೇಳಿದ್ದೇನು ?

ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವ ವಿಚಾರ ಸದ್ಯ ಕರ್ನಾಟಕದಾದ್ಯಂತ ತೀವ್ರ ಚರ್ಚೆಯಲ್ಲಿದೆ. ಹಲವೆಡೆ ಪ್ರತಿಭಟನೆಗಳೂ ನಡೆಯುತ್ತಿವೆ. ಕಲಬುರಗಿ ಜಿಲ್ಲೆಯಲ್ಲಿಯೂ ವಕ್ಫ್ ವಿರುದ್ಧ ಪ್ರತಿಭಟನೆಯಲ್ಲಿ ನಡೆದಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಮರುಳಾರಾಧ್ಯ ಶಿವಾಚಾರ್ಯ ಶ್ರೀ, ಪೊಲೀಸರ ಎದುರೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಲಬುರಗಿಯ ಅಫಜಲಪುರದಲ್ಲಿ, ‘ವಕ್ಫ್ ಹಠಾವೋ ದೇಶ್ ಬಚಾವೋ’ ಘೋಷಣೆಯೊಂದಿಗೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸ್ವಾಮೀಜಿ, ಆ ಸಮುದಾಯದ ಎಲ್ಲ ಯುವಕರ ಮನೆಗಳಲ್ಲಿ ತಲ್ವಾರ್​​ ಗಳಿವೆ. ಎದುರು ಬಂದವರನ್ನು ಕಡಿಯುತ್ತೇವೆ ಎನ್ನುತ್ತಾರೆ. ಭಾರತವನ್ನು ಪಾಕಿಸ್ತಾನ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟವಿದೆ. ಹೀಗಾಗಿ ಮಕ್ಕಳ ಕೈಗೆ ಪೆನ್ನು ಕೊಡುವ ಬದಲು ತಲ್ವಾರ್ ಕೊಡಬೇಕು ಎಂದು ಹೇಳಿದ್ದರು. ಪೊಲೀಸರ ಎದುರೇ ಸ್ವಾಮೀಜಿ ಈ ಹೇಳಿಕೆ ನೀಡಿದ್ದರು. ಮರುಳಾರಾಧ್ಯ ಶಿವಾಚಾರ್ಯ ಶ್ರೀ ಹೇಳಿಕೆಗೆ ಇದೀಗ ವಿರೋಧ ವ್ಯಕ್ತವಾಗುತ್ತಿದೆ.

ಮತ್ತೊಂದೆಡೆ, ಪ್ರಧಾನಿ ಮೋದಿ ಮಾಡಿರುವ 700 ಕೋಟಿ ರೂಪಾಯಿ ಅಕ್ರಮ ಆರೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪರಮೇಶ್ವರ್, ಬಿಜೆಪಿ ಮುಖಂಡರು ಹೇಳಿದ್ದರೆ ಬಿಡಿ ಅನ್ನಬಹುದಿತ್ತು. ಆದರೆ ದೇಶದ ಪ್ರಧಾನಮಂತ್ರಿಗಳು ಈ ರೀತಿ ಹೇಳಿದ್ದಾರೆ. ಮೋದಿ ಸತ್ಯಕ್ಕೆ ದೂರವಾದ ಮಾತುಗಳನ್ನು ಆಡಿದ್ದಾರೆ. ಪ್ರಧಾನಿ ಮೋದಿ ಬಳಿ ಯಾವ ಪುರಾವೆ ಇದೆ ಗೊತ್ತಿಲ್ಲ, ಮಹಾರಾಷ್ಟ್ರದಲ್ಲಿಯೂ ನಮ್ಮ ಪಕ್ಷ ಇದೆ. ಅಲ್ಲಿನ ‘ಕೈ’ ನಾಯಕರು ಚುನಾವಣೆ ನೋಡಿಕೊಳ್ತಾರೆ. ನಾವು ಇಲ್ಲಿಂದ ಅವರಿಗೆ ಹಣ ಕಳುಹಿಸುವ ಅಗತ್ಯ ಇಲ್ಲ ಎಂದರು.