ಶ್ರೀನಗರ : ರಾಂಬನ್ ಮತ್ತು ರಿಯಾಸಿ ಜಿಲ್ಲೆಗಳ ರಾಜ್‌ಗಢ ಮತ್ತು ಮಹೋರ್ ಪ್ರದೇಶಗಳಲ್ಲಿ ಶನಿವಾರ ಮಧ್ಯರಾತ್ರಿ ಎರಡು ಬಾರಿ ಮೇಘಸ್ಫೋಟ ಸಂಭವಿಸಿದ್ದು, ಒಂದೇ ಕುಟುಂಬದ 7 ಸದಸ್ಯರು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ, ಒಬ್ಬರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಇಂದು (ಶನಿವಾರ) ರಾಜ್‌ಗಢದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಎರಡು ಮನೆಗಳು ಮತ್ತು ಒಂದು ಶಾಲಾ ಕಟ್ಟಡಕ್ಕೆ ಹಾನಿಯಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ರಿಯಾಸಿಯ ಮಹೋರ್ ಪ್ರದೇಶದ ಬದ್ದರ್ ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಮೇಘಸ್ಫೋಟದಿಂದಾಗಿ ಅವರು ಮಣ್ಣಿನ ಮನೆ ಅವಶೇಷಗಳ ಅಡಿಯಲ್ಲಿ ಹೂತು ಮೃತಪಟ್ಟಿದ್ದಾರೆ.
ಸ್ಥಳೀಯ ಗ್ರಾಮಸ್ಥರು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಏಳು ಶವಗಳನ್ನು ಹೊರತೆಗೆದರು. ಮೃತರನ್ನು ನಜೀರ್ ಅಹ್ಮದ್, ವಜೀರಾ ಬೇಗಂ, ಬಿಲಾಲ್ ಅಹ್ಮದ್, ಮೊಹಮ್ಮದ್ ಮುಸ್ತಫಾ, ಮೊಹಮ್ಮದ್ ಆದಿಲ್, ಮೊಹಮ್ಮದ್ ಮುಬಾರಕ್ ಮತ್ತು ಮೊಹಮ್ಮದ್ ವಾಸಿಂ ಎಂದು ಗುರುತಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ ರಂಬನ್ ಜಿಲ್ಲೆಯ ರಾಜ್‌ಗಡ್ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ. ಪ್ರಸ್ತುತ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಘಟನೆಯಲ್ಲಿ ಸಾವನ್ನಪ್ಪಿದ ಮೂವರ ಶವಗಳನ್ನು ರಕ್ಷಣಾ ಕಾರ್ಯಕರ್ತರು ಹೊರತೆಗೆದಿದ್ದಾರೆ ಎನ್ನಲಾಗಿದೆ.















