ಮನೆ ರಾಜಕೀಯ ಸಂಪುಟ ವಿಸ್ತರಣೆ: ಇನ್ನೆರಡು ದಿನಗಳಲ್ಲಿ ವರಿಷ್ಠರ ಜೊತೆ ಚರ್ಚೆ; ಸಿಎಂ ಬೊಮ್ಮಾಯಿ

ಸಂಪುಟ ವಿಸ್ತರಣೆ: ಇನ್ನೆರಡು ದಿನಗಳಲ್ಲಿ ವರಿಷ್ಠರ ಜೊತೆ ಚರ್ಚೆ; ಸಿಎಂ ಬೊಮ್ಮಾಯಿ

0

ಹುಬ್ಬಳ್ಳಿ (Hubli)- ಸಚಿವ ಸಂಪುಟ ವಿಸ್ತರಣೆ ಸಂಬಂಧ ಇನ್ನೆರಡು ದಿನಗಳಲ್ಲಿ ಪಕ್ಷದ ವರಿಷ್ಠರನ್ನು ಸಂಪರ್ಕಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ಸಲಹೆ ಸೂಚನೆಗಳನ್ನು ಪಾಲಿಸಲಾಗುವುದು. ರಾಜ್ಯಸಭೆ ಮತ್ತು ವಿಧಾನಪರಿಷತ್‌ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ಪ್ರಮುಖ ಸಮಿತಿ ಸಭೆ ನಡೆಸಿದ್ದನ್ನೂ ವರಿಷ್ಠರು ಗಮನಿಸಿದ್ದಾರೆ ಎಂದರು.

ಬಿ.ವೈ.ವಿಜಯೇಂದ್ರ ಸಂಪುಟ ಸೇರ್ಪಡೆ ವಿಷಯ ವರಿಷ್ಠರಿಗೆ ಬಿಟ್ಟಿದ್ದು ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಸಂಪುಟ ವಿಸ್ತರಣೆ ಸಂಬಂಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜತೆಗೂ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಖಾಲಿ ಇರುವ ಐದು ಸಚಿವ ಸ್ಥಾನಗಳ ಭರ್ತಿ ಮಾಡುವ ಕಸರತ್ತು ಪಕ್ಷದಲ್ಲಿ ಭಾರಿ ತಲ್ಲಣ ಸೃಷ್ಟಿಸುವ ಸಾಧ್ಯತೆಯೂ ಇದೆ. ಸಚಿವ ಸ್ಥಾನಕ್ಕೆ ದೊಡ್ಡ ದಂಡೇ ಸಿದ್ಧವಾಗಿ ನಿಂತಿದೆ. ಯಾರೋ ಒಬ್ಬರಿಗೆ ಕೊಟ್ಟು ಬೇರೆಯವರಿಗೆ ಬಿಟ್ಟರೆ ಅಸಮಾಧಾನ ಭುಗಿಲೇಳುವುದು ಖಚಿತ ಎಂಬ ಚರ್ಚೆಯೂ ಪಕ್ಷದ ವಲಯದಲ್ಲಿ ನಡೆದಿದೆ.

ವಿಸ್ತರಣೆ ಬದಲಿಗೆ ಸಂಪುಟ ಪುನರ್‌ ರಚನೆ ಕಸರತ್ತಿಗೆ ಕೈ ಹಾಕಿದರೆ, ಕೆಲವು ಸಚಿವರನ್ನು ಕೈಬಿಟ್ಟು ಹೆಚ್ಚು ಶಾಸಕರಿಗೆ ಅವಕಾಶ ನೀಡಬಹುದು. ಇದರಿಂದ ದೊಡ್ಡ ಮಟ್ಟದ ಪ್ರತಿರೋಧವನ್ನು ತಣಿಸಲು ಸಾಧ್ಯ. ವರಿಷ್ಠರು ಈ ಎಲ್ಲವನ್ನು ಅಳೆದು ತೂಗಿ ಸೂಚನೆಗಳನ್ನು ನೀಡಬಹುದು ಎಂದು ಮೂಲಗಳು ಹೇಳಿವೆ.

ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಸಚಿವ ಸ್ಥಾನವನ್ನು ಭರ್ತಿ ಮಾಡಲಾಗುತ್ತದೆ. ಗುಜರಾತ್‌, ಉತ್ತರಾಖಂಡ ರಾಜ್ಯಗಳಲ್ಲಿ ಮಾಡಿದ ಬದಲಾವಣೆ ರೀತಿಯಲ್ಲೇ ಎರಡು ಪೈಕಿ ಒಂದು ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದೆ.

ಇನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದ ಉಪಚುನಾವಣೆಗಳಲ್ಲಿ ಹಳೆ ಮೈಸೂರು ಭಾಗದ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದ ಕಾರಣಕ್ಕಾಗಿ ಬಿ.ವೈ. ವಿಜಯೇಂದ್ರ ಅವರನ್ನು ಪರಿಷತ್‌ಗೆ ಆಯ್ಕೆ ಮಾಡಲು ವರಿಷ್ಠರು ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸಂಪುಟ ವಿಸ್ತರಣೆ ಮಾಡಿದರೆ ಸಚಿವ ಸ್ಥಾನ ಕಲ್ಪಿಸುವ ಸಾಧ್ಯತೆಯೂ ಇದೆ. ಈ ಮೂಲಕ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಚುನಾವಣೆ ಉಸ್ತುವಾರಿ ನೀಡಿ, ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವ ಗುರಿ ನಿಗದಿ ಮಾಡಬಹುದು. ಇದರ ಮೇಲೆ ವಿಜಯೇಂದ್ರ ಅವರ ಮುಂದಿನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ವಿಜಯೇಂದ್ರ ಸಚಿವರಾದರೆ ಮಾತ್ರ ಯಡಿಯೂರಪ್ಪ ಮುಂದಿನ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು ಎಂದೂ ಮೂಲಗಳು ಹೇಳಿವೆ.