ಬೆಂಗಳೂರು(Bengaluru): ಭಾರತದ 75ನೇ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ನೂತನ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಹೊಸ ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಸ್ವಚ್ಛತೆ, ಪೌಷ್ಟಿಕತೆ ಕಾಪಾಡಲು, ರೈತರು, ಶ್ರಮಿಕರ ಅಭ್ಯುದಯಕ್ಕಾಗಿ ಹಾಗೂ ಕೆಚ್ಚೆದೆಯ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಕೆಲವು ಕೊಡುಗೆಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶೇ. 100 ರಷ್ಟು ಶೌಚಾಲಯಗಳ ನಿರ್ಮಾಣವನ್ನು ₹250 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಆ ಮೂಲಕ ಶಾಲೆ, ಕಾಲೇಜುಗಳಲ್ಲಿ ಸ್ವಚ್ಛ-ಆರೋಗ್ಯಕರ ವಾತಾವರಣ ನಿರ್ಮಿಸಲಾಗುವುದು. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮಾದರು ಮತ್ತಿತರ ಕುಶಲ ಕರ್ಮಿಗಳಿಗೆ ತಲಾ ₹50 ಸಾವಿರ ವರೆಗೆ ಸಾಲ ನೀಡಲಾಗುವುದು ಎಂದರು.
ಸಹಾಯಧನ (Loan cum subsidy) ಯೋಜನೆಯನ್ನು ಜಾರಿಗೊಳಿಸಲಾಗುವುದು. ರೈತರ ಮಕ್ಕಳಿಗೆ ಜಾರಿಗೊಳಿಸಿರುವ ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯವನ್ನು ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲಾಗುವುದು. ಭೂ ರಹಿತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಆದ್ಯತೆಯಾಗಿರಿಸಿಕೊಂಡು, ಅಗತ್ಯವನ್ನಾಧರಿಸಿ ರಾಜ್ಯದಲ್ಲಿ ಹೊಸದಾಗಿ 4,050 ಅಂಗನವಾಡಿ ತೆರೆಯಲಾಗುವುದು. ಆ ಮೂಲಕ 16 ಲಕ್ಷ ಕುಟುಂಬಗಳ ಮಕ್ಕಳಿಗೆ ಪೌಷ್ಠಿಕ ಆಹಾರ ಕಲ್ಪಿಸಲಾಗುವುದು. ಆ ಮೂಲಕ 16 ಲಕ್ಷ ಕುಟುಂಬಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಶಾಲಾ ಪೂರ್ವ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲಾಗುವುದು. 8100 ಮಹಿಳೆಯರಿಗೂ ಇದರಿಂದ ಉದ್ಯೋಗಾವಕಾಶ ದೊರೆಯಲಿದೆ ಎಂದು ಹೇಳಿದರು.
ಸೈನಿಕರು ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಕಾರ್ಯನಿರ್ವಹಿಸುತ್ತಾರೆ. ರಾಜ್ಯದ ಸೈನಿಕರು ಕರ್ತವ್ಯ ನಿರತರಾಗಿದ್ದಾಗ ಮೃತಪಟ್ಟರೆ, ಅವರ ಕುಟುಂಬದ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ ಮೃತ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲಾಗುವುದು ಎಂದು ತಿಳಿಸಿದರು.