ಬೆಂಗಳೂರು (Bengaluru)- ಶಾಸಕ ಜಿ.ಟಿ.ದೇವೇಗೌಡ ಅವರ ಮೊಮ್ಮಗಳು ಹಾಗೂ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ 3 ವರ್ಷದ ಗೌರಿಯನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆಕೆ ಶನಿವಾರ ತಡರಾತ್ರಿ ನಿಧನ ಹೊಂದಿದ್ದಾಳೆ.
ಟ್ವೀಟ್ ಮಾಡಿ ಸಂತಾಪ ಸೂಚಿಸಿರುವ ಬೊಮ್ಮಾಯಿ ಅವರು, ಮಾಜಿ ಸಚಿವ ಜಿ. ಟಿ. ದೇವೇಗೌಡರ ಮೊಮ್ಮಗಳು, ಮೂರು ವರ್ಷದ ಮಗು ಗೌರಿ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಮಗುವಿನ ಆತ್ಮಕ್ಕೆ ಶಾಂತಿ ಕರುಣಿಸಿ, ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರು ಮಾಜಿ ಸಚಿವ, ಆತ್ಮೀಯರಾದ ಜಿ.ಟಿ ದೇವೇಗೌಡರ ಮೊಮ್ಮಗಳು ಗೌರಿ ಸಾವಿನ ಸುದ್ದಿ ತಿಳಿದು ಅತೀವ ಸಂಕಟವಾಯಿತು. ಬದುಕಿ ಬಾಳಬೇಕಿದ್ದ ಎಳೆಯ ಕಂದಮ್ಮನ ಅಗಲಿಕೆಯಿಂದ ನೊಂದಿರುವ ದೇವೇಗೌಡರ ಕುಟುಂಬದ ಶೋಕದಲ್ಲಿ ನಾನೂ ಭಾಗಿ. ಮೃತ ಗೌರಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ, ಮಗುವಿನ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಜಿ.ಟಿ ದೇವೇಗೌಡರು ಹಾಗೂ ಆಕೆಯ ತಂದೆ, ತಾಯಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಶಾಸಕರಾದ ಜಿ.ಟಿ.ದೇವೇಗೌಡ ಅವರ 3 ವರ್ಷದ ಮೊಮ್ಮಗಳು ಗೌರಿಯ ನಿಧನದ ಸುದ್ದಿ ಕೇಳಿ ನಿಜಕ್ಕೂ ಮನಸ್ಸಿಗೆ ನೋವುಂಟಾಯಿತು. ಬದುಕು ಕೆಲವೊಮ್ಮೆ ತುಂಬಾ ಅನಿಶ್ಚಿತ ಮತ್ತು ಕ್ರೂರ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸುವ ಶಕ್ತಿಯನ್ನು ದೇವರು ಆ ಕುಟುಂಬಕ್ಕೆ ಕೊಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಜಿ.ಟಿ. ದೇವೇಗೌಡರ ಮೊಮ್ಮಗಳು, ಸಹೋದರ ಜಿ.ಡಿ.ಹರೀಶ್ ಗೌಡ ಅವರ ಪುತ್ರಿ ಗೌರಿ ಅನಾರೋಗ್ಯದಿಂದ ನಮ್ಮನ್ನಗಲಿದ ವಿಷಯ ಕೇಳಿ ತೀವ್ರ ದುಃಖವಾಯಿತು. ಕುಟುಂಬಸ್ಥರಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ, ಕಂದಮ್ಮನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.