ಮನೆ ರಾಜಕೀಯ ಮಾರ್ಚ್ 9 ರಂದು ಕರ್ನಾಟಕ ಬಂದ್’ಗೆ ಕರೆ ನೀಡಿದ ಕಾಂಗ್ರೆಸ್: ಹಾಸ್ಯಸ್ಪದ ಎಂದ ಸಿಎಂ ಬೊಮ್ಮಾಯಿ

ಮಾರ್ಚ್ 9 ರಂದು ಕರ್ನಾಟಕ ಬಂದ್’ಗೆ ಕರೆ ನೀಡಿದ ಕಾಂಗ್ರೆಸ್: ಹಾಸ್ಯಸ್ಪದ ಎಂದ ಸಿಎಂ ಬೊಮ್ಮಾಯಿ

0

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷವು ಮಾರ್ಚ್ 9ರಂದು ಕರ್ನಾಟಕ ಬಂದ್’​ಗೆ ಕರೆ ಕೊಟ್ಟಿರುವುದು ಹಾಸ್ಯಾಸ್ಪದವಾಗಿದೆ.ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ನಗರದಲ್ಲಿಂದು ತಮ್ಮ‌ ನಿವಾಸದ ಬಳಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಕೂಪವಾಗಿದೆ. ಅವರ ಕೈ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ಜನರು ಈ ಬಂದ್ ಕರೆಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದರು.

ಆಪಾದನೆ ಮಾಡುವವರು ಮೊದಲು ಶುದ್ಧ ಹಸ್ತರಿರಬೇಕು. ಆಗ ಅದಕ್ಕೆ ಬೆಲೆ ಬರುತ್ತದೆ. ಕಾಂಗ್ರೆಸ್‌’ನವರು ದಿಂಬು, ಹಾಸಿಗೆಯನ್ನೂ ಬಿಟ್ಟಿಲ್ಲ. ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಸಿದ್ಧರಾಮಯ್ಯ ಎಷ್ಟೆಲ್ಲ ಟಾರ್ಗೆಟ್ ಕೊಟ್ಟಿದ್ರು ಅಂತ ಎಂ.ಬಿ.ಪಾಟೀಲ್, ಜಾರ್ಜ್, ಮಹದೇವಪ್ಪಗೆ ಕೇಳಬೇಕು. ಭ್ರಷ್ಟಾಚಾರದ ಕೂಪದಲ್ಲಿ ಇರುವವರು ಆಪಾದನೆ ಮಾಡಿದರೆ ನಡೆಯುವುದಿಲ್ಲ ಎಂದರು.

ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಬಂದ್ ಆಗುತ್ತಿದೆ. ಹೀಗಾಗಿ ರಾಜ್ಯ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ. ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆದುಕೊಳ್ಳಬಹುದು ಅನ್ನೋದು ಮೂರ್ಖತನ. ಚುನಾವಣಾ ಅಖಾಡವಿದೆ, ಜನರೇ ವಿಮರ್ಶೆ ಮಾಡುತ್ತಾರೆ ಎಂದು ಹೇಳಿದರು.

ಬೆಳಗಾವಿ ರಾಜಹಂಸಗಢದಲ್ಲಿ ಕಾಂಗ್ರೆಸ್‌’ನಿಂದ ಶಿವಾಜಿ ಪ್ರತಿಮೆ ಮರು ಉದ್ಘಾಟನೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಇದೊಂದು ಹಾಸ್ಯಾಸ್ಪದ ಸಂಗತಿ. ಸರ್ಕಾರವೇ ಬಂದು ಮೂರ್ತಿ ಉದ್ಘಾಟನೆ ಮಾಡಿದ ಮೇಲೆ ಈ ರೀತಿ ಮಾಡೋದು ಸರಿಯಲ್ಲ. ಒಣ ಪ್ರತಿಷ್ಠೆಗಾಗಿ ಮಾಡಿದ್ದಾರೆ. ರಾಷ್ಟ್ರನಾಯಕರ ಹೆಸರಲ್ಲಿ ರಾಜಕೀಯ ಮಾಡೋದು ಥರವಲ್ಲ ಎಂದರು.