ಮನೆ ಸುದ್ದಿ ಜಾಲ ಜನವರಿ 9ರ ಬಳಿಕವಷ್ಟೆ ಸಿಎಂ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆ

ಜನವರಿ 9ರ ಬಳಿಕವಷ್ಟೆ ಸಿಎಂ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆ

0

ನವದೆಹಲಿ : ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ತಾತ್ಕಲಿಕ ಬ್ರೇಕ್ ಬಿದ್ದಿದೆ. ಜನವರಿ 9 ವರೆಗೂ ಯಾವುದೇ ಬೆಳವಣಿಗೆ ನಡೆಯುವ ಲಕ್ಷಣಗಳು ಸದ್ಯಕ್ಕೆ ಕಂಡು ಬರುತ್ತಿಲ್ಲ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶದಿಂದ ವಾಪಸ್ ಆದ ಬಳಿಕ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಕಾಂಗ್ರೆಸ್ ಕಾರ್ಯಕಾರಣಿ ಸಭೆ ಹಿನ್ನೆಲೆ ಸಿಎಂ ಸಿದ್ಧರಾಮಯ್ಯ ದೆಹಲಿಗೆ ತೆರಳಿದ್ದರು. ಸಭೆಯಲ್ಲಿ ಭಾಗಿಯಾಗದ ಬಳಿಕ ಹೈಕಮಾಂಡ್ ನಾಯಕರ ಜೊತೆಗೆ ಪ್ರತ್ಯೇಕ ಸಭೆ ನಡೆಯುವ ಸಾಧ್ಯತೆಗಳನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ, ಹೈಕಮಾಂಡ್ ನಾಯಕರು ಲಭ್ಯವಾಗದ ಹಿನ್ನೆಲೆ ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸದೇ ಸಿಎಂ ಸಿದ್ದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ರಾಹುಲ್ ಗಾಂಧಿ ನಾಳೆಯಿಂದ ಜನವರಿ ಎಂಟರವರೆಗೂ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಹೀಗಾಗಿ, ಸಿಎಂ ಬದಲಾವಣೆ ಅಥವಾ ಸಂಪುಟ ಪುನಾರಚನೆ ವಿಚಾರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದ್ದು, ರಾಹುಲ್ ಗಾಂಧಿ ವಿದೇಶದಿಂದ ಮರಳಿದ ಬಳಿಕ ಅಂದರೆ ಜನವರಿ 9 ರ ಬಳಿಕವಷ್ಟೆ ಈ ಬಗ್ಗೆ ಚರ್ಚೆಗಳು ಪುನಾರಂಭಗೊಳ್ಳುವ ಸಾಧ್ಯತೆ ಇದೆ.

ಸಚಿವ ಸಂಪುಟ ಪುನಾರಚನೆ ಲೆಕ್ಕಚಾರದಲ್ಲಿದ್ದ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರು ವಾಪಸ್ ಆದ ಬಳಿಕ ದೆಹಲಿಗೆ ತೆರಳಿ ಎಲ್ಲ ನಾಯಕರನ್ನು ಭೇಟಿಯಾಗಿ ಬಜೆಟ್‌ಗೂ ಮುನ್ನ ಸಂಪುಟ ಪುನಾರಚನೆ ಮಾಡುವ ಇಂಗಿತವನ್ನು ಆಪ್ತರ ಮುಂದೆ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದು, ಹೈಕಮಾಂಡ್ ನಿರ್ಧಾರ ಕುತೂಹಲ ಮೂಡಿಸಿದೆ.