ಬೆಂಗಳೂರು/ಮೈಸೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ನೀಡಿದ್ದ ʻಬಿ ರಿಪೋರ್ಟ್ʼ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಪ್ಪಿದೆ. ಇದರೊಂದಿಗೆ ಸಿದ್ದರಾಮಯ್ಯ ಅವರು ಕಳಂಕಮುಕ್ತರಾಗಿದ್ದು, ಕಾನೂನು ಹೋರಾಟಕ್ಕೆ ದೊಡ್ಡ ಜಯ ಸಿಕ್ಕಂತಾಗಿದೆ. ಮುಡಾ ಹಗರಣದ ಆರೋಪಿಗಳಾಗಿದ್ದ ಸಿದ್ದರಾಮಯ್ಯ (A1), ಪಾರ್ವತಿ (A2), ಮಲ್ಲಿಕಾರ್ಜುನ ಸ್ವಾಮಿ (A3), ದೇವರಾಜು (A4) ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಉಳಿದ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸುವಂತೆ ಕೋರ್ಟ್ ಆದೇಶ ನೀಡಿದೆ.
ಲೋಕಾಯುಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ ನಾಲ್ವರ ವಿರುದ್ಧ ಬಿ.ರಿಪೋರ್ಟ್ ಸಲ್ಲಿಸಿದ್ದರು. ಈ ಬಿ-ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಕೋರ್ಟ್ ಮೆಟ್ಟಿಲೇರಿದ್ದರು. ವಾದ ಆಲಿಸಿದ್ದ ನ್ಯಾಯಾಲಯ ಇಂದು ಬಿ-ರಿಪೋರ್ಟ್ ಅಂಗೀಕರಿಸಿದೆ. ನಾಲ್ವರು ಸಿದ್ದರಾಮಯ್ಯ (A1), ಪಾರ್ವತಿ (A2), ಮಲ್ಲಿಕಾರ್ಜುನ ಸ್ವಾಮಿ (A3), ದೇವರಾಜು (A4) ಅವರನ್ನು ದೋಷಮುಕ್ತಗೊಳಿಸಿದ್ದು, ಉಳಿದ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸುವಂತೆ ಹೇಳಿದೆ.
ಇದಕ್ಕೂ ಮುನ್ನ ವಿಚಾರಣೆ ನಡೆಸಿದ್ದ ಕೋರ್ಟ್, ಈ ಹಿಂದೆ ಲೋಕಾಯುಕ್ತ ಪೊಲೀಸರು ಸಾಕಷ್ಟು ದೋಷಾರೋಪ ಪಟ್ಟಿ ಹಾಕಿದ್ದಾರೆ. ಆದರೆ ಯಾಕೆ ಅಂತಿಮ ವರದಿ ಸಲ್ಲಿಕೆ ಮಾಡುತ್ತಿಲ್ಲ ಎಂದು ಜಡ್ಜ್ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಲೋಕಾಯುಕ್ತ ವಿಶೇಷ ಸರ್ಕಾರಿ ಆಭಿಯೋಜಕ, ಈಗಾಗಲೇ ಅಂತಿಮ ವರದಿ ತಯಾರಿ ಆಗಿದೆ. ಅನುಮತಿ ಸಿಗದ ಕಾರಣ ಸಲ್ಲಿಕೆ ಮಾಡುತ್ತಿಲ್ಲ. ಸ್ವಲ್ಪ ಸಮಯ ನೀಡಿದರೆ ಸೀಲ್ಡ್ ಕವರ್ನಲ್ಲಿ ವರದಿ ನೀಡಲು ಸಿದ್ಧ ಎಂದು ತಿಳಿಸಿದ್ದರು.















