ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳ ಆಯ್ಕೆ, ಪಕ್ಷ ಸಂಘಟನೆ, ಚುನಾವಣೆಗೆ ಸಿದ್ಧತೆ ಕುರಿತಂತೆ ಮುಖ್ಯಮಂತ್ರಿಯ ನಿವಾಸ ‘ಕಾವೇರಿ’ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರ ಜೊತೆ ಸಮಾಲೋಚನೆ ನಡೆಸಿದರು.
ಬೆಳಗ್ಗಿನ ಉಪಾಹಾರಕ್ಕೆ ಸಚಿವರನ್ನು ತಮ್ಮ ನಿವಾಸಕ್ಕೆ ಮುಖ್ಯಮಂತ್ರಿ ಆಹ್ವಾನಿಸಿದ್ದರು.
ಸಚಿವರಾದ ಜಿ. ಪರಮೇಶ್ವರ, ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ, ಕೆ.ಎನ್. ರಾಜಣ್ಣ, ಎಚ್.ಸಿ. ಮಹಾದೇವಪ್ಪ, ಬೈರತಿ ಸುರೇಶ್, ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಎನ್.ಎಸ್. ಬೋಸರಾಜ, ಸಂತೋಷ್ ಲಾಡ್, ಕೆ.ಎಚ್. ಮುನಿಯಪ್ಪ, ಜಮೀರ್ ಅಹಮ್ಮದ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್ ಭಾಗವಹಿಸಿದರು.
ಅನಾರೋಗ್ಯದ ಕಾರಣ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಗೈರಾದರು. ಈ ಬಗ್ಗೆ ಮುಖ್ಯಮಂತ್ರಿಗೆ ಅವರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾವೇರಿ ನಿವಾಸದ ಆವರಣದೊಳಗೆ ನೂತನವಾಗಿ ನಿರ್ಮಿಸಿರುವ ಸಭಾಂಗಣವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ಸಭೆಯ ಬಳಿಕ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ‘ಲೋಕಸಭಾ ಚುನಾವಣೆ ಸಂಬಂಧ ಸಭೆ ಕರೆದಿದ್ದರು. ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಅಸಮಧಾನ ಇಲ್ಲ’ ಎಂದರು.
ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ : ಪರಮೇಶ್ವರ
ಉಪಾಹಾರ ಕೂಟಕ್ಕೆ ತೆರಳುವ ಮೊದಲು ಸದಾಶಿವನಗರದಲ್ಲಿ ತಮ್ಮ ನಿವಾಸದ ಬಳಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಅವರಿವರು ಹೇಳಿಕೆ ಕೊಡುತ್ತಿದ್ದರೆ, ಅದರಿಂದ ಗೊಂದಲ ಆಗುವುದಿಲ್ಲ. ಲೋಕಸಭೆ ಚುನಾವಣೆ ಬಗ್ಗೆ ಸಿಎಂ, ಡಿಸಿಎಂ ಚರ್ಚಿಸಲು ಸಭೆ ಕರೆದಿದ್ದಾರೆ. ಅದನ್ನು ಬಿಟ್ಟು ಬೇರೆ ಕಾರ್ಯಸೂಚಿ ಇದ್ದಂತಿಲ್ಲ ಎಂದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ಜಿಲ್ಲೆಗಳಲ್ಲಿ ಸಭೆ ಮಾಡಬೇಕು. ನನಗೆ ಬೆಂಗಳೂರು ಉತ್ತರ ಕ್ಷೇತ್ರದ ಹೊಣೆ ಕೊಟ್ಟಿದ್ದಾರೆ. ನಾನು ಇನ್ನೂ ಸಭೆ ಮಾಡಿಲ್ಲ. ದಿನಾಂಕ ನಿಗದಿ ಮಾಡಿಕೊಂಡು ಸಭೆ ಮಾಡ್ತೇನೆ. ನಮಗೆಲ್ಲ ಸಮಯ ಕೊಟ್ಟಿದ್ದಾರೆ. ಅಷ್ಟರಲ್ಲಿ ಕೆಲಸ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕುರಿತು ಕೇಳಿದಾಗ, ಈ ಬಗ್ಗೆ ದಯಮಾಡಿ ನನ್ನನ್ನು ಪ್ರಶ್ನೆ ಮಾಡಬೇಡಿ. ಯಾವುದಕ್ಕೂ ಉತ್ತರ ಕೊಡುವುದಿಲ್ಲ ಎಂದರು.