ಮನೆ ರಾಜ್ಯ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ

0

ಮೈಸೂರು : : ಲಕ್ಷಾಂತರ ಜನರು ಕಾತುರದಿಂದ ಕಾದಿದ್ದ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ಸಂಜೆ 4.42ರಿಂದ 5.06 ಅವಧಿಯ ಶುಭ ಕುಂಭ ಲಗ್ನದಲ್ಲಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಸಿಎಂ ಜೊತೆ ಡಿಸಿಎಂ ಡಿಕೆ ಶಿವಕುಮಾರ್‌, ಉಸ್ತುವಾರಿ ಸಚಿವ ಮಹಾದೇವಪ್ಪ,  ಸಂಸದ ಯದುವೀರ್‌ ಪುಷ್ಪಾರ್ಚನೆಗೈದರು.

ಅಲಂಕೃತಗೊಂಡ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡ ಅಧಿದೇವತೆ ಚಾಮುಂಡಿತಾಯಿಯನ್ನು ಹೊತ್ತು 6ನೇ ಬಾರಿ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ.

ಅಭಿಮನ್ಯು ಆನೆ ಅರಮನೆ ಬಳಿಯಿಂದ ಚಿನ್ನದ ಅಂಬಾರಿಯನ್ನು ಹೊತ್ತು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ. ದೂರ ಸಾಗಲಿದೆ. ಜಂಬೂ ಸವಾರಿಗೆ ಆಕರ್ಷಕ ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳು ಸಾಥ್​ ನೀಡುವ ಮೂಲಕ ಮೆರವಣಿಗೆಯನ್ನು ಮತ್ತಷ್ಟು ಮೆರುಗುಗೊಳಿಸಲಿವೆ.

ಜಗತ್ಪ್ರಸಿದ್ಧ ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಜನರು ಕಾಯುತ್ತಿದ್ದಾರೆ. ಇನ್ನು ಜಂಬೂ ಸವಾರಿ ಮೆರವಣಿಗೆಯಲ್ಲಿ ವಿಶೇಷ ಟ್ಯಾಬ್ಲ್ಯೂಗಳು ಕಣ್ಮನ ಸೆಳೆಯಲು ಸಜ್ಜಾಗಿವೆ. 31 ಜಿಲ್ಲೆಗಳ ಸ್ತಬ್ಧಚಿತ್ರಗಳು ತಮ್ಮ ಜಿಲ್ಲೆಯ ಮಹತ್ವ, ಕಲೆ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸಲಿವೆ. ದಸರಾ ಜಂಬೂಸವಾರಿಗೆ ಸ್ತಬ್ಧಚಿತ್ರ ಹಾಗೂ ವಿವಿಧ ಕಲಾತಂಡಗಳು ಮೆರುಗು ನೀಡುತ್ತಿವೆ.  ಒಟ್ಟು 57 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ. ಮೆರವಣಿಗೆಯಲ್ಲಿ ಸಾಗುವ ದಾರಿಯಲ್ಲಿ 140ಕ್ಕೂ ಹೆಚ್ಚು ಕಲಾ ತಂಡಗಳು ಭಾಗಿಯಾಗಿವೆ.

ದಸರಾ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಧನಂಜಯ ಹೆಜ್ಜೆ ಹಾಕಿದರೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪ, ನೌಫತ್‌ ಆನೆಯಾಗಿ ಗೋಪಿ, ಪಟ್ಟದ ಆನೆಯಾಗಿ ಶ್ರೀಕಂಠ ಮತ್ತು ಲಕ್ಷ್ಮಿ ಹೆಜ್ಜೆ ಹಾಕುತ್ತಿವೆ. ಸಾಲಾನೆಯಾಗಿ ಮಹೇಂದ್ರ, ಭೀಮ, ಕಂಜನ್, ಏಕಲವ್ಯ, ಪ್ರಶಾಂತ, ಸುಗ್ರೀವ, ಹೇಮಾವತಿ ಈ ಆನೆಗಳು ಅಭಿಮನ್ಯುವಿಗೆ ಸಾಥ್‌ ನೀಡುತ್ತಿವೆ.

ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ಚಾಮುಂಡಿತಾಯಿಯನ್ನು ಕಣ್ತುಂಬಿಕೊಂಡು ಜನರು ಧನ್ಯತಾ ಭಾವ ಮೆರೆದರು. ದಸರಾ ಜಂಬೂಸವಾರಿ ವೀಕ್ಷಿಸಲು ಅರಮನೆ ಅಂಗಳದಲ್ಲಿ 48 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಉತ್ತರ ದ್ವಾರದ ಮೂಲಕ ತೆರಳಿರುವ ಜಂಬೂಸವಾರಿ ಮೆರವಣಿಗೆ ಕೆ.ಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಸರ್ಕಲ್, ಬಂಬೂ ಬಜಾರ್, ಹೈವೇ ಸರ್ಕಲ್ ಮೂಲಕ ಸಾಗಿ ಸಂಜೆ ವೇಳೆಗೆ ಬನ್ನಿಮಂಟಪ ಪಂಜಿನ ಕವಾಯತು ಮೈದಾನ ತಲುಪಲಿದೆ.

ಅರಮನೆ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದ ಗತವೈಭವ ಕಳೆಗಟ್ಟಿದೆ. ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನಸಾಗರ ಅರಮನೆ ಸುತ್ತಮುತ್ತ ನೆರೆದಿದೆ. ಸಾಂಪ್ರದಾಯಿಕ ವಿಜೃಂಭಣೆಗೆ ಮುನ್ನ, ಮೆರವಣಿಗೆಗೆ ಶುಭ ಚಾಲನೆ ನೀಡುವ ನಂದಿ ಧ್ವಜಪೂಜೆಯು ಸಂಪ್ರದಾಯಬದ್ಧವಾಗಿ ನೆರವೇರಲಿದೆ. ಈ ಮೂಲಕ ಐತಿಹಾಸಿಕ ಜಂಬೂಸವಾರಿ ವಿಧ್ಯುಕ್ತವಾಗಿ ಆರಂಭಗೊಳ್ಳಲಿದ್ದು, ಇಡೀ ನಗರವೇ ಸಂಭ್ರಮದಲ್ಲಿ ತೇಲಾಡುತ್ತಿದೆ.