ಮನೆ ರಾಜ್ಯ ಸಿಎಂ ಜನಸ್ಪಂದನಾ: ಜನರಿಂದ ಅಹವಾಲು ಸ್ವೀಕರಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಿದ್ದರಾಮಯ್ಯ

ಸಿಎಂ ಜನಸ್ಪಂದನಾ: ಜನರಿಂದ ಅಹವಾಲು ಸ್ವೀಕರಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಿದ್ದರಾಮಯ್ಯ

0

ಬೆಂಗಳೂರು: ಜನ ಸ್ಪಂದನಾ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧಡೆಯಿಂದ ಬಂದ ಜನರಿಂದ ಅಹವಾಲುಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವು ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.

ತಮ್ಮ ಕಾವೇರಿ ನಿವಾಸದಿಂದ ಗೃಹ ಕಚೇರಿ ಕೃಷ್ಣಾಗೆ ಬಂದ ಮುಖ್ಯಮಂತ್ರಿ, ಜನರೊಂದಿಗೆ ಮಾತನಾಡಿ  ಸಮಸ್ಯೆಗಳನ್ನು ಆಲಿಸಿದರು.

ಅಂಗವಿಕಲರ ಬಳಿ ತೆರಳಿದ ಮುಖ್ಯಮಂತ್ರಿ, ಅಹವಾಲು ಆಲಿಸಿದರು. ಬಳಿಕ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿಕೊಂಡು ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.

ಸಮಸ್ಯೆ ಕೇಳಿದ್ದಕ್ಕೆ ಪ್ರೀತಿಯಿಂದ ಮುಖ್ಯಮಂತ್ರಿಯ ತಲೆ ಸವರಿ ವಯೋವೃದ್ಧೆಯೊಬ್ಬರು ಆಶೀರ್ವಾದ ಮಾಡಿದರು.

ಬೀದಿಬದಿ ವ್ಯಾಪಾರಿಗಳಿಗೆ, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರಿಗೆ ಆಗುತ್ತಿರುವ ಪೊಲೀಸ್ ಮತ್ತು ಬಿಬಿಎಂಪಿ ಅಧಿಕಾರಿಗಳ ಕಿರುಕುಳದ ಬಗ್ಗೆ ಬಡ ವ್ಯಾಪಾರಿ ನಿಂಗಮ್ಮ ಎಂಬವರು ಮುಖ್ಯಮಂತ್ರಿಗೆ ದೂರು ಸಲ್ಲಿಸಿದರು. ತಕ್ಷಣ ಪೊಲೀಸ್ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ಕರೆಸಿ ನಿಂಗಮ್ಮ‌ ಅವರಿಗೆ ಕಿರುಕುಳ ತಪ್ಪಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದರು.

ವೃದ್ದಾಪ್ಯ ವೇತನ ಮಂಜೂರಾತಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಹಲವರು ದೂರು ಸಲ್ಲಿಸಿದರು. ಆಗ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆ ನಿರ್ದೇಶಕರನ್ನು ಕರೆಸಿದ ಮುಖ್ಯಮಂತ್ರಿ, ತಾಂತ್ರಿಕ‌ ತೊಂದರೆ ಇದ್ದರೆ ತಕ್ಷಣ ಬಗೆಹರಿಸುವಂತೆ ಮತ್ತು ಸಿಬ್ಬಂದಿಯಿಂದ ತೊಂದರೆ ಆಗುತ್ತಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಮನೆ ಕಂದಾಯ ಕಟ್ಟಿದ್ದರೂ ದುಪ್ಪಟ್ಟು ದಂಡ ಹಾಕಿದ್ದಾರೆ. ಕಂದಾಯ ಕಟ್ಟಿದ ರಶೀದಿ ಇಟ್ಟುಕೊಂಡು ಬಿಬಿಎಂಪಿಗೆ ಹೋದರೆ, ‘ನಮಗೆ ಗೊತ್ತಿಲ್ಲ ಹೋಗಿ ಸರ್ಕಾರಕ್ಕೆ ಕೇಳಿ’ ಎಂದು ಸಿಬ್ಬಂದಿ ದರ್ಪದಿಂದ ನಡೆದುಕೊಳ್ಳುತ್ತಾರೆ ಎಂದು ವೃದ್ದೆಯೊಬ್ಬರ ದೂರಿಗೆ ಆಕ್ರೋಶಗೊಂಡ ಮುಖ್ಯಮಂತ್ರಿ, ಬಿಬಿಎಂಪಿ ಅಧಿಕಾರಿಯನ್ನು ಕರೆದು ಪ್ರಕರಣವನ್ನು ಖುದ್ದಾಗಿ ಗಮನಿಸಿ ಸಂಜೆಯೊಳಗೆ ಪರಿಹಾರ ಒದಗಿಸಿ ತಮಗೆ ವರದಿ ಕೊಡುವಂತೆ ಸೂಚಿಸಿದರು.

ಹುಣಸೂರಿನ‌ ಕಲ್ಲಹಳ್ಳಿ ಪಂಚಾಯ್ತಿಯ ಲಕ್ಷ್ಮೀಬಾಯಿ ಎನ್ನುವವರು ಅಲೆಮಾರಿ ಡೋಂಗ್ರಿ ಗೆರೆಸಿಯಾ ಸಮುದಾಯದವರಿಗೆ 40 ಮನೆಗಳು ಮಂಜೂರಾಗಿವೆ. ಇವರಿಗೆ ಮನೆ ಕಟ್ಟಲು ಮಂಜೂರಾತಿ ನೀಡುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಸಿಎಂ ಅಲೆಮಾರಿ ಅಭಿವೃದ್ಧಿ ನಿಗಮದ ಎಂಡಿ ಅವರನ್ನು ಕರೆದು, ಅರ್ಜಿಯನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸಿ ತಮಗೆ ವರದಿ ನೀಡಬೇಕು ಎಂದು ಸೂಚಿಸಿದರು.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ  ನಸೀಮಾ ಬಾನು ಅವರು ಜಿಲ್ಲಾ ಪಂಚಾಯಿತಿ  ತಮ್ಮ ಮನೆಯನ್ನು ಅಕ್ರಮವಾಗಿ ಪ್ರವೇಶ ಮಾಡಿರುವ ಬಗ್ಗೆ ದೂರು ಸಲ್ಲಿಸಿದರು.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಡಿ.ಪಿ.ಭಾಗ್ಯ ಅವರ ಮನೆ ಶೇ 60 % ಹಾನಿಯಾಗಿದ್ದು ಶೇ 100 ರ ಪರಿಹಾರ ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು.

ಈ ಮನವಿಗಳನ್ನು ಆದ್ಯತೆ ಮೇಲೆ ಪರಿಗಣಿಸಿ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ  ಸೂಚನೆ ನೀಡಿದರು.

ಎಲ್ಲ ಇಲಾಖೆಗಳ ಹೆಚ್ಚುವರಿ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ.

ಮುಖ್ಯಮಂತ್ರಿಯ ಗೃಹ ಕಚೇರಿಗೆ ಬಂದವರಿಗೆ ಮೆಜೆಸ್ಟಿಕ್‌ಗೆ ತಲುಪಲು ಉಚಿತ ಬಸ್ ಸೌಲಭ್ಯ ಮಾಡಲಾಗಿದೆ.

ಹಿಂದಿನ ಲೇಖನಐರಿಶ್ ಬರಹಗಾರ ಪಾಲ್ ಲಿಂಚ್’ಗೆ ಪ್ರತಿಷ್ಟಿತ ಬೂಕರ್ ಪ್ರಶಸ್ತಿ
ಮುಂದಿನ ಲೇಖನಐವರ ಆತ್ಮಹತ್ಯೆ ಪ್ರಕರಣ: ಸ್ಥಳಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ