ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಅವರಿಗೆ ಮುಸ್ಲಿಮರೆಂದರೆ ಪ್ರೀತಿ. ಅವರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು ಕೊಡುತ್ತಾರೆ ಎಂದು ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರಿಗೆ ಇವರು ಮುತ್ತು ಕೊಡುತ್ತಾರೆ, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರಿಗೆ ಮುತ್ತು ಕೊಡುತ್ತಾರೆ, ಕುಕ್ಕರ್ ಬಾಂಬ್ ಇಟ್ಟವರಿಗೂ ಮುತ್ತು ಕೊಡುತ್ತಾರೆ. ಆದರೆ ಶಾಂತ ರೀತಿಯಿಂದ ಹೋರಾಟ ಮಾಡಿದ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಎಲ್ಲರ ಮೀಸಲಾತಿ ತೆಗೆದು ಮುಸ್ಲಿಮರಿಗೆ ಕೊಡಲು ಹೊರಟಿದ್ದಾರೆ. ಹಸಿ ಗೋಡೆ ಮೇಲೆ ಹಳ್ಳು ಒಗೆಯುವ ಕೆಲಸವನ್ನು ಸಿಎಂ ಮಾಡಿದ್ದಾರೆ. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸಿಮರು. ಮೀಸಲಾತಿ ಕೊಡುವುದು ಹೇಗೆ ಸಂವಿಧಾನ ವಿರೋಧಿಯಾಗುತ್ತೆ? ಈ ಬಗ್ಗೆ ಸಿಎಂ ಶ್ವೇತ ಪತ್ರ ಹೊರಡಿಸಲಿ ಎಂದಿದ್ದಾರೆ.
ಲಿಂಗಾಯತರಿಗೆ, ಒಕ್ಕಲಿಗರಿಗೆ, ಮರಾಠರಿಗೆ ಮೀಸಲಾತಿ ಕೊಡಲ್ಲ ಅಂತ ಘೋಷಣೆ ಮಾಡಲಿ. ಸಂವಿಧಾನದ ವಿರುದ್ಧವಾಗಿ ಮುಸ್ಲಿಮರಿಗೆ ಮೀಸಲಾತಿ ಕೊಡಲಾಗಿದೆ. ಅದರ ಬಗ್ಗೆ ಇವರು ಮಾತನಾಡುವುದಿಲ್ಲ. ಸಿಎಂ ಪ್ರಕಾರ ಮುಸ್ಲಿಮರು ಬಿಟ್ಟು ಬೇರೆ ಯಾರು ಏನು ಕೇಳಬಾರದು, ಏನೇ ಕೇಳಿದರೂ ಮುಸ್ಲಿಮರಷ್ಟೇ ಕೇಳಬೇಕು. ಕಾಂಗ್ರೆಸ್ ಸರ್ಕಾರ ನಮಗೆ ಮೀಸಲಾತಿ ಕೊಡುತ್ತೆ ಅಂತ ಗ್ಯಾರಂಟಿ ಇಲ್ಲ. ಲಾಠಿ ಚಾರ್ಜ್ ಸಂಪೂರ್ಣ ಜವಾಬ್ದಾರಿ ಸಿಎಂ ಸಿದ್ದರಾಮಯ್ಯನವರದ್ದು. ನಮ್ಮ ಸರ್ಕಾರ ಇದ್ದಾಗ ಇದಕ್ಕಿಂತ ಬಹಳ ಜನ ಕೂಡಿದ್ದರು. ಆವಾಗ ನಮ್ಮ ಸಿಎಂ ಮತ್ತು ಸಚಿವರು ಸೇರಿ ಒಂದು ಪರಿಹಾರ ಕಂಡುಹಿಡಿಯಲು ಮುಂದಾಗಿದ್ವಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಮುಸ್ಲಿಮರನ್ನು ಓಲೈಸುವುದನ್ನು ಬಿಟ್ಟರೆ ಏನು ಇಲ್ಲ. ಹಿಂದೂ ಸಮಾಜ ಅವರಿಗೆ ಮತ ಹಾಕಿದೆ ಎನ್ನುವ ಕಲ್ಪನೆ ಕೂಡ ಅವರಿಗಿಲ್ಲ. ಕೇವಲ ಮುಸ್ಲಿಂ ಸಮಾಜದ ಬಗ್ಗೆ ಕಾಳಜಿ ಇದೆ. ಮುಸ್ಲಿಂ ಸಮಾಜಕ್ಕೂ ಮಾಡಲಿ, ನಾವು ಬೇಡ ಅನ್ನಲ್ಲ, ಆದರೆ ಬೇರೆಯವರೂ ಇದಾರಲ್ಲ. ಎಲ್ಲಾ ದುಡ್ಡು ಮೀಸಲಾತಿ ಮುಸ್ಲಿಂ ಸಮಾಜಕ್ಕೆ ಕೊಡುವುದಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಶೇ. 36 ಒಬಿಸಿ ಮೀಸಲಾತಿ ಇದೆ. ಅದರಲ್ಲಿ ಶೇ. 23 ಮುಸ್ಲಿಂ ಸಮಾಜಕ್ಕಿದೆ. ಧರ್ಮ ಆಧಾರಿತ ಮೀಸಲಾತಿ ಇಲ್ಲ ಅಂತ ಅಂಬೇಡ್ಕರ್ ಸಂವಿಧಾನ ಹೇಳಿದೆ. ಶೈಕ್ಷಣಿಕ ಮತ್ತು ಸಾಮಾಜಿಕ ಆಧಾರದ ಮೇಲೆ ಮೀಸಲಾತಿ ಇದೆ. ಸಂಪೂರ್ಣ ಮುಸ್ಲಿಂ ಅಂತ ನಾಲ್ಕು ಪರ್ಸೆಂಟ್ ಕೆಟೆಗೆರಿ ಮಾಡಿದ್ದಾರೆ. ಕೆಟೆಗೆರಿ 2ಎ ದಲ್ಲಿ ಶೇ. 18 ರಷ್ಟು ಮುಸ್ಲಿಂಗೆ ನೀಡಿದ್ದಾರೆ. ಕೆಟೆಗೆರಿ 1ರಲ್ಲಿ ಮುಸ್ಲಿಂ ಸಮಾಜಕ್ಕೆ ನೀಡಿದ್ದಾರೆ. ಮುಸ್ಲಿಂಮರಿಗೆ ಶೇ. 23 ರಷ್ಟು ಕೊಟ್ಟರೆ ಬೇರೆಯವರು ಏನು ಮಾಡಬೇಕು? ಶೇ. 4 ರಷ್ಟು ಮೀಸಲಾತಿ ಸಂವಿಧಾನ ವಿರೋಧವಾಗಿ ಅದನ್ನ ತೆಗೆದು ಮರಾಠ, ಒಕ್ಕಲಿಗರು, ಲಿಂಗಾಯಿತರು, ರೆಡ್ಡಿಗೆ ಕೊಡಬೇಕು ಎಂದಿದ್ದಾರೆ.
ರಾಹುಲ್ ಗಾಂಧಿ ಕೈಯಲ್ಲಿ ಸಂವಿಧಾನ ಹಿಡಿದುಕೊಂಡವರ ಹಾಗೆ ಬೈಬಲ್ ಹಿಡಿದುಕೊಂಡಿರುತ್ತಾರೆ. ಮಾತು ಎತ್ತಿದ್ರೆ ಕಾಂಗ್ರೆಸ್ನವರು ಅಂಬೇಡ್ಕರ್ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ರಾಹುಲ್ ಗಾಂಧಿ ಮೆಲ್ನೋಟಕ್ಕೆ ಸಂವಿಧಾನದ ಪ್ರತಿ ಹಿಡಿದುಕೊಂಡಂತೆ ಮಾಡುತ್ತಾರೆ, ಆದರೆ ಅವರು ಬೈಬಲ್ ಹಿಡಿದಿರುತ್ತಾರೆ. ಅಂಬೇಡ್ಕರ್ ಸಂವಿಧಾನ ಅಂತ ಹೇಳಿಕೊಂಡು ಆಟ ಆಡುತ್ತಾರೆ ಎಂದು ಕಿಡಿಕಾರಿದ್ದಾರೆ.