ಚಿಕ್ಕಬಳ್ಳಾಪುರ: ರಾಜ್ಯದ ರೈತರಿಗೆ ನಿಟ್ಟುಸಿರು ತರುವ ಘೋಷಣೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದ್ದು, ಪಿಎಂ ಕುಸುಮ್-ಸಿ ಯೋಜನೆಯಡಿ ಹಗಲು ಸಮಯದಲ್ಲಿಯೇ ಕೃಷಿಗೆ ಅಗತ್ಯವಿರುವ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರ ಸಜ್ಜಾಗಿದೆ. ಇದರಿಂದ ರೈತರ ಪಂಪ್ ಸೆಟ್‌ಗಳಿಗೆ ಇನ್ನು ಮುಂದೆ ನಿಶ್ಚಿತವಾಗಿ ಗುಣಮಟ್ಟದ ವಿದ್ಯುತ್ ಲಭ್ಯವಾಗಲಿದೆ.
ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಹನುಮೇನಹಳ್ಳಿ ಮತ್ತು ಚರಕಮಟ್ಟೇನಹಳ್ಳಿ ಗ್ರಾಮಗಳ 60 ಎಕರೆ ಪ್ರದೇಶದಲ್ಲಿ ಸ್ಥಾಪಿತಗೊಂಡಿರುವ 20 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕವನ್ನು ಇಂದು ಉದ್ಘಾಟಿಸಿದ ಸಿಎಂ, ಇದು ಕುಸುಮ್-ಸಿ ಯೋಜನೆಯಡಿ ಕರ್ನಾಟಕದಲ್ಲಿ ಸ್ಥಾಪಿತವಾಗಿರುವ ಅತಿದೊಡ್ಡ ಘಟಕವಾಗಿದೆ ಎಂದು ಘೋಷಿಸಿದರು.
ಈ ಯೋಜನೆಯ ಉದ್ದೇಶ, ಕೃಷಿ ಫೀಡರ್‌ಗಳ ಸೌರೀಕರಣದ ಮೂಲಕ ರೈತರ ಪಂಪ್ ಸೆಟ್‌ಗಳಿಗೆ ಹಗಲು ವೇಳೆಯಲ್ಲಿಯೇ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದು. ಈ ಮೂಲಕ, ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆ ಇಲ್ಲದೆ ಕಾರ್ಯ ನಿರ್ವಹಿಸಬಹುದು ಮತ್ತು ರಾತ್ರಿ ವೇಳೆ ಇತರ ಉದ್ದೇಶಗಳಿಗಾಗಿ ಹೆಚ್ಚುವರಿ ವಿದ್ಯುತ್ ಉಳಿತಾಯ ಮಾಡಬಹುದು.
ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಸುಮಾರು ₹3.5 ರಿಂದ ₹4 ಕೋಟಿ ವೆಚ್ಚವಾಗುತ್ತದೆ. ಈ ಪೈಕಿ ₹1.05 ಕೋಟಿ ಕೇಂದ್ರ ಸರ್ಕಾರದಿಂದ ಸಹಾಯಧನವಾಗಿದ್ದು, ಉಳಿದ ಹಣವನ್ನು ರಾಜ್ಯ ಸರ್ಕಾರ ಮತ್ತು ಖಾಸಗಿ ಹೂಡಿಕೆದಾರರು ಹೊರುತ್ತಾರೆ. ಸರ್ಕಾರ ಪ್ರತಿ ಮೆವ್ಯಾಟ್‌ಗೆ ₹3.17 ರಷ್ಟು ದರದಲ್ಲಿ ವಿದ್ಯುತ್ ಖರೀದಿಸಿ ರೈತರಿಗೆ ಪೂರೈಸಲಿದೆ.
ಸರ್ಕಾರಿ ಭೂಮಿ ಲಭ್ಯವಿದ್ದರೆ ಉಚಿತವಾಗಿ ನೀಡಲಾಗುತ್ತದೆ. ಆದರೆ, ವಿದ್ಯುತ್ ಉತ್ಪಾದಕರು ಪ್ರತಿ ಎಕರೆಗೆ ₹25,000 ಪಾವತಿಸಬೇಕಾಗಿದ್ದು, ಈ ಮೊತ್ತವನ್ನು ಸ್ಥಳೀಯ ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ಉಪಯೋಗಿಸಲಾಗುತ್ತದೆ. ಖಾಸಗಿ ಭೂಮಿಯಿದ್ದರೆ, ಡೆವಲಪರ್‌ಗಳು ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡು, ಭೂಮಾಲೀಕರಿಗೆ ವಾರ್ಷಿಕ ಕನಿಷ್ಠ ₹25,000 ಪಾವತಿಸಬೇಕಾಗಿದೆ.
ಸಿಎಂ ಸಿದ್ದರಾಮಯ್ಯ ಮಾತನಾಡಿ, “ನಾವು ಮುಂದಿನ ಮೂರು ವರ್ಷಗಳಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧಿಸುವ ಗುರಿ ಹೊಂದಿದ್ದೇವೆ. ಈಗಾಗಲೇ 4 ಸಾವಿರ ಮೆ.ವ್ಯಾ. ಉತ್ಪಾದನೆ ಹೆಚ್ಚಿಸಿದ್ದೇವೆ. ಈ ಯೋಜನೆಯಿಂದ ರೈತರ ಮುಖ್ಯವಾದ ಸಂಕಷ್ಟಕ್ಕೆ ಸಮರ್ಥ ಪರಿಹಾರ ಒದಗಿಸುತ್ತೇವೆ” ಎಂದರು.
ಸಿಎಂ ಕೇಂದ್ರ ಸರ್ಕಾರದ ಪಾಲು ಕೇವಲ 30% ಮಾತ್ರವಾಗಿದ್ದು, ಶೇ20 ರಷ್ಟು ಹಣ ಹೂಡಿಕೆದಾರರದ್ದು. ರಾಜ್ಯ ಸರ್ಕಾರ ಶೇ.50 ರಷ್ಟು ಹೊಣೆವಹಿಸುತ್ತಿದೆ ಎಂದು ಹೇಳಿದರು. ಆದರೆ ಯೋಜನೆಗೆ ಹೆಸರು ಮಾತ್ರ ಕೇಂದ್ರದದೇ ಎನ್ನುವುದು ನ್ಯಾಯಯುತವಲ್ಲ ಎಂದರು.
ಮುಂದಿನ ಬಜೆಟ್‌ನಲ್ಲಿ ಗೌರಿಬಿದನೂರಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೇ ಅಲಿಪುರ ಗ್ರಾಮಪಂಚಾಯತ್ ಅನ್ನು ಪಟ್ಟಣ ಪಂಚಾಯ್ತಿಗೆ ಮೇಲ್ದರ್ಜೆ ನೀಡುವ ಭರವಸೆ ನೀಡಿದರು.














