ಮನೆ ರಾಜಕೀಯ ಮಿತ್ರಕೂಟದ ವಿರುದ್ಧ ಸಿಎಂ ಸೆಡ್ಡು: ದಸರೆಯ ನಂತರ ರಾಜ್ಯಪ್ರವಾಸ

ಮಿತ್ರಕೂಟದ ವಿರುದ್ಧ ಸಿಎಂ ಸೆಡ್ಡು: ದಸರೆಯ ನಂತರ ರಾಜ್ಯಪ್ರವಾಸ

0

ಬೆಂಗಳೂರು: ತಮ್ಮನ್ನು ಕೆಳಗಿಳಿಸಲು ಬಿಜೆಪಿ ಮಿತ್ರಕೂಟ ನಡೆಸುತ್ತಿರುವ ಸಂಚಿನ ವಿವರವನ್ನು ಜನರ ಮುಂದಿಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ನಿರ್ಧರಿಸಿದ್ದು,ಈ ಹಿನ್ನೆಲೆಯಲ್ಲಿ ದಸರೆಯ ನಂತರ ರಾಜ್ಯಪ್ರವಾಸ ಮಾಡಲು ಸಜ್ಜಾಗಿದ್ದಾರೆ.

Join Our Whatsapp Group

ಇಂದು ಬೆಳಿಗ್ಗೆ ಪಕ್ಷದ ವರಿಷ್ಟರಾದ ರಾಹುಲ್ ಗಾಂಧಿ ಅವರ ಜತೆ ದೂರವಾಣಿ ಸಂಭಾಷಣೆ ನಡೆಸಿದ ನಂತರ ಸಿದ್ಧರಾಮಯ್ಯ ಈ ತೀರ್ಮಾನಕ್ಕೆ ಬಂದಿದ್ದು,ತಮ್ಮನ್ನು ಕೆಳಗಿಳಿಸುವ ಯತ್ನಕ್ಕೆ ಕುಗ್ಗದೆ,ಜಗ್ಗದೆ ಮುಂದುವರಿಯಲು ನಿರ್ಧರಿಸಿದ್ದಾರೆ.

ಇದೇ ರೀತಿ ಮೂಡಾ ಪ್ರಕರಣದ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆಗೆ ಆದೇಶ ನೀಡಿದ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಹೋಗದಿರಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದು,ಲೋಕಾಯುಕ್ತ ತನಿಖೆಯನ್ನು ಎದುರಿಸಲು ಸಜ್ಜಾಗಿದ್ದಾರೆ.

ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು,ಇಂದು ಬೆಳಿಗ್ಗೆ ಸಿದ್ಧರಾಮಯ್ಯ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು ನೀಡಿದ ಸಲಹೆಯನ್ನು ಪೂರಕವಾಗಿ ಸ್ವೀಕರಿಸಿದ್ದಾರೆ ಎಂದು ವಿವರಿಸಿವೆ.

ಮೂಡಾ ಪ್ರಕರಣ ಪಡೆಯುತ್ತಿರುವ ತಿರುವಿನ ಹಿನ್ನೆಲೆಯಲ್ಲಿ ಬೇಸರ ಮಾಡಿಕೊಳ್ಳಬೇಡಿ.ಯಾವ ಕಾರಣಕ್ಕೂ ಜಗ್ಗಬೇಡಿ.ಇಡೀ ಪಕ್ಷ ನಿಮ್ಮೊಂದಿಗಿದೆ ಎಂದು ರಾಹುಲ್ ಗಾಂಧಿ ಅವರು ಸಿದ್ಧರಾಮಯ್ಯ ಅವರಿಗೆ ಹೇಳಿದ್ದಾರೆ.

ಆದಷ್ಟು ಶೀಘ್ರವಾಗಿ ನೀವು ರಾಜ್ಯಪ್ರವಾಸ ಆರಂಭಿಸಿ.ಹೋದಲ್ಲಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವುದರ ಜತೆ ಬಿಜೆಪಿ-ಜೆಡಿಎಸ್ ಮಿತ್ರಕೂಟ ನಿಮ್ಮನ್ನು ಇಳಿಸಲು ನಡೆಸುತ್ತಿರುವ ಸಂಚಿನ ಬಗ್ಗೆ ಜನರಿಗೆ ವಿವರಿಸಿ ಎಂದು ರಾಹುಲ್ ಗಾಂಧಿ ಅವರು ಸೂಚಿಸಿದ್ದಾರೆ.

ನಿಮ್ಮನ್ನು ಕೆಳಗಿಳಿಸಿದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವುದು ಸುಲಭ ಎಂಬ ಕಾರಣಕ್ಕಾಗಿ ಈ ಪಿತೂರಿ ನಡೆದಿದೆ.ಈ ಪಿತೂರಿಗೆ ನೀವು ತಕ್ಕ ಉತ್ತರ ನೀಡಲೇಬೇಕು.ಹೀಗಾಗಿ ಜನತಾ ನ್ಯಾಯಾಲಯಕ್ಕೆ ಹೋಗಬೇಕು ಎಂದು ರಾಹುಲ್ ಗಾಂಧಿ ವಿವರಿಸಿದ್ದಾರೆ.

ಈಗ ನಡೆದಿರುವ ಬೆಳವಣಿಗೆಗಳಿಂದ ನೀವು ಬೇಸತ್ತಿರುವುದು ಸಹಜ.ಆದರೆ ಈಗ ಬೇಸರಕ್ಕೆ ಸಮಯ ನೀಡುವ ಕಾಲ ಇದಲ್ಲ.ಬದಲಿಗೆ ಬಿಜೆಪಿ ಮಿತ್ರಕೂಟದ ಸಂಚಿಗೆ ಪ್ರತಿ ಉತ್ತರ ನೀಡುವ ಕಾಲ ಎಂದು ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದು,ಅವರ ಈ ಭರವಸೆಯ ಮಾತುಗಳ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ದಸರೆಯ ನಂತರ ರಾಜ್ಯಪ್ರವಾಸ ಆರಂಭಿಸಲು ನಿರ್ಧರಿಸಿದ್ದಾರೆ.

ಲೋಕಾಯುಕ್ತ ತನಿಖೆ ನಡೆಸಲು ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ ತನಿಖೆ ಎದುರಿಸಲು ಸಿದ್ಧ ಎಂದಿದ್ದ ಸಿದ್ದರಾಮಯ್ಯ ಈಗ ಅದೇ ತೀರ್ಪಿನ ವಿರುದ್ಧ ಮೇಲ್ಮನವಿ ಹೋಗುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಮೂಲಗಳ ಪ್ರಕಾರ,ಮೂಡಾ ಪ್ರಕರಣದ ಹಿನ್ನೆಲೆಯಲ್ಲಿ ಹೈಕೋರ್ಟ್ ನೀಡಿದ ತೀರ್ಪಿಗೆ ತಡೆಯಾಜ್ಞೆ ಕೋರಿ ಮೇಲ್ಮನವಿ ಹೋಗುವಂತೆ ಆಪ್ತರು ಸಲಹೆ ನೀಡುತ್ತಿದ್ದು ಈ ಸಂಬಂಧ ಸಿದ್ದರಾಮಯ್ಯ ಅವರು ಪರಿಶೀಲನ ನಡೆಸುತ್ತಿದ್ದಾರೆ.

ಈ ಮಧ್ಯೆ ಬುಧವಾರ ಕೇರಳ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಜತೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸಹ,ಭರವಸೆಯ ಮಾತನಾಡಿದ್ದು ಇಡೀ ಪಕ್ಷ ಒಮ್ಮತದಿಂದ ನಿಮ್ಮ ಜತೆ ನಿಲ್ಲಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.