ಬೆಂಗಳೂರು: ವರುಣ ವಿಧಾನಸಭಾ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಸಿದ್ದರಾಮಯ್ಯ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿ ಸಚಿವಾಲಯ ಕಾರ್ಯನಿರ್ವಹಣೆಗೆ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.
ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳಿಗೆ ವಲಯವಾರು ಜವಾಬ್ದಾರಿ ಹಂಚಿಕೆ ಮಾಡಿದ್ದು, ಸಂಸದರು, ಶಾಸಕರ ಕುಂದುಕೊರತೆ, ಅನುದಾನಕ್ಕೆ ಸಂಬಂಧಪಟ್ಟಂತೆ ನಿರ್ವಹಣೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
ಕಂದಾಯ ವಿಭಾಗವಾರು ಜವಾಬ್ದಾರಿ ಹಂಚಿಕೆ ಮಾಡಿ ಬುಧವಾರ ದಂದು ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿ ಕೆ ಎನ್ ವಿಜಯ್’ಗೆ ವರುಣ ಕ್ಷೇತ್ರದ ಜವಾಬ್ದಾರಿ ನೀಡಿದ್ದು, ಕ್ಷೇತ್ರದ ಎಲ್ಲ ವಿಷಯಗಳ ನಿರ್ವಹಣೆಗೆ ಸೂಚನೆ ನೀಡಿದ್ದಾರೆ.
ಕಲಬುರಗಿ, ಮೈಸೂರು, ಬೆಳಗಾವಿ, ಬೆಂಗಳೂರು ವಿಭಾಗಕ್ಕೆ ಪ್ರತ್ಯೇಕವಾಗಿ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಈ ಭಾಗದ ಶಾಸಕರು ಹಾಗೂ ಸಂಸದರ ಕ್ಷೇತ್ರದ ಸಮಸ್ಯೆಗಳನ್ನು ಕುಂದುಕೊರತೆಗಳನ್ನು, ಅಧಿಕಾರಿಗಳು ನಿರ್ವಹಿಸಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ದಿನನಿತ್ಯದ ಮಾಧ್ಯಮಗಳ ವರದಿಗಳಲ್ಲಿ ಬರುವ ಸಮಸ್ಯೆಗಳ ಪರಿಹಾರಕ್ಕೂ ಅಧಿಕಾರಿಯೊಬ್ಬರಿಗೆ ಪ್ರತ್ಯೇಕ ಜವಾಬ್ದಾರಿ ನೀಡಲಾಗಿದೆ. ಕೇಂದ್ರ ಸರ್ಕಾರದ ಜೊತೆಗೆ ಪತ್ರ ವ್ಯವಹಾರ ನಡೆಸಲು ಸಿಎಂ ಸಚಿವಾಲಯದ ಅಧಿಕಾರಿಯೊಬ್ಬರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂಬುದು ಆದೇಶದ ಪ್ರತಿಯಿಂದ ತಿಳಿದುಬಂದಿದೆ.