ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ಬಗ್ಗೆ ಮರು ತನಿಖೆ ನಡೆಸುವಂತೆ ಅವರ ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಇಲಾಖೆಯ ಜೊತೆಗೆ ಚರ್ಚಿಸಿ ಮರು ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಈ ಹಿಂದಿನ ಸರಕಾರ ಮಾಡಿರುವ ತನಿಖೆಯ ಬಗ್ಗೆ ಕುಟುಂಬದ ಸದಸ್ಯರಿಗೆ ತೃಪ್ತಿ ತಂದಿಲ್ಲ. ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.
ರಾಜ್ಯದ ಗುತ್ತಿಗೆದಾರರ ಬಿಲ್ ಬಾಕಿ ಮತ್ತು ಕಾಂಗ್ರೆಸ್ ಸರಕಾರದ ಮೇಲೆ ಕೇಳಿಬಂದಿರುವ ಕಮಿಷನ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಬಿಜೆಪಿಯವರು ಹಸಿ ಸುಳ್ಳು ಹೇಳುತ್ತಿದ್ದಾರೆ. ಹತಾಶರಾಗಿರುವ ಅವರಿಗೆ ಬೇರೆ ದಾರಿ ಕಾಣಿಸುತ್ತಿಲ್ಲ ಎಂದು ತಿರುಗೇಟು ನೀಡಿದರು.
ಹಿಂದಿನ ಸರಕಾರದಲ್ಲಿ ಕೇಳಿಬಂದಿದ್ದ 40 ಪರ್ಸಂಟ್ ಕಮಿಷನ್ ಬಗ್ಗೆ ತನಿಖೆ ನಡೆಸುತ್ತೇವೆ. ಗುಣಮಟ್ಟದ ಕಾಮಗಾರಿಗಳು ಆಗಿದ್ದರೆ ಹಣ ಬಿಡುಗಡೆ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.