ಮನೆ ರಾಜ್ಯ ಸಿಎಂ ಸಿದ್ದರಾಮಯ್ಯ: ರಾಜ್ಯ ಸರ್ಕಾರ 105 ತಾಲ್ಲೂಕುಗಳನ್ನು ಶೀಘ್ರ ಬರಪೀಡಿತ ಎಂದು ಘೋಷಣೆ

ಸಿಎಂ ಸಿದ್ದರಾಮಯ್ಯ: ರಾಜ್ಯ ಸರ್ಕಾರ 105 ತಾಲ್ಲೂಕುಗಳನ್ನು ಶೀಘ್ರ ಬರಪೀಡಿತ ಎಂದು ಘೋಷಣೆ

0

ಬೆಂಗಳೂರು: ಸೆಪ್ಟೆಂಬರ್ 4 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ 105 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.

ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು 113 ತಾಲ್ಲೂಕುಗಳಲ್ಲಿ ಜಂಟಿ ಸಮೀಕ್ಷೆ ನಡೆಸಿದ್ದು, 105 ತಾಲ್ಲೂಕುಗಳು ಬರಪೀಡಿತವಾಗಿವೆ. ಇನ್ನೂ 73 ತಾಲ್ಲೂಕುಗಳು ಬರಗಾಲದ ಪರಿಸ್ಥಿತಿ ಎದುರಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಈ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಇದೇ ವೇಳೆ ತಮಿಳುನಾಡು ಮತ್ತು ಕರ್ನಾಟಕ ನಡುವಿನ ಕಾವೇರಿ ಜಲ ವಿವಾದವನ್ನು ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಸಿದ್ದರಾಮಯ್ಯ ಅವರು ಮನವಿ ಮಾಡಿದರು.

”ಕಾವೇರಿ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಲು ರಾಜ್ಯ ಸರಕಾರ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯಲು ಉದ್ದೇಶಿಸಿದೆ. ಭೇಟಿಗೆ ಸಮಯ ಕೇಳಲಾಗಿದ್ದು, ಭೇಟಿಗೆ ಅವಕಾಶ ಸಿಕ್ಕರೆ ಕರ್ನಾಟಕದಲ್ಲಿನ ನೀರಿನ ಸಮಸ್ಯೆಯ ನೈಜತೆಯನ್ನು ಸರ್ಕಾರವು ಪ್ರಧಾನಿ ಮತ್ತು ಸಚಿವರಿಗೆ ತಿಳಿಸುತ್ತದೆ ಎಂದು ಹೇಳಿದರು.

ಕೆಆರ್ ಎಸ್ ಅಣೆಕಟ್ಟೆಯಲ್ಲಿ 113 ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಮುಂಗಾರು ಮಳೆಯ ಕೊರತೆಯಿಂದಾಗಿ ಹಾರಂಗಿ ಮತ್ತು ಕಬಿನಿ ಅಣೆಕಟ್ಟುಗಳಲ್ಲಿ ನೀರಿನ ಕೊರತೆಯಿದೆ. ರಾಜ್ಯದ ರೈತರು ತಾವು ಬೆಳೆದ ಬೆಳೆಗಳನ್ನೇ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಬಿಕ್ಕಟ್ಟಿನ ಸೂತ್ರ ಅಳವಡಿಸುವ ಅಗತ್ಯವಿದೆ’ ಎಂದರು.

‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಕುರಿತು ಮಾತನಾಡಿ, ರಾಷ್ಟ್ರೀಯ, ರಾಜ್ಯ ಮಟ್ಟದ ಮತ್ತು ಸ್ಥಳೀಯ ಆಡಳಿತದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವುದು ಸವಾಲಿನ ಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟರು.

ವೈಯಕ್ತಿಕವಾಗಿ ಹೇಳುವುದಾದರೆ ಒಂದು ಸಮಯದಲ್ಲಿ ದೇಶಾದ್ಯಂತ ಚುನಾವಣೆ ನಡೆಸುವುದು ಕಷ್ಟ ಎಂದು ನಾನು ಭಾವಿಸುತ್ತೇನೆ. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು ವರದಿ ಸಲ್ಲಿಸಲಿ ಎಂದು ಹೇಳಿದರು.