ಮೈಸೂರು: ಅನಾರೋಗ್ಯದಿಂದ ಬಳಲುತ್ತಿರುವ ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ಮನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿದರು.
ಅವರು ತೆರಳಿದ ಬಳಿಕ ಪತ್ರಕರ್ತರೊಡನೆ ಮಾತಾಡಿದ ಶ್ರೀನಿವಾಸ್ ಪ್ರಸಾದ್, ಮುಖ್ಯಮಂತ್ರಿಯವರ ಜೊತೆ ಬಹಳ ವರ್ಷಗಳಿಂದ ಮಾತಾಡಿರಲಿಲ್ಲ, ಅವರು ಇಂದು ಮನೆಗೆ ಬಂದಿದ್ದರು ಮತ್ತು ಅರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದರು.
ತಮ್ಮ ನಡುವೆ ರಾಜಕಾರಣದ ಬಗ್ಗೆ ಹೆಚ್ಚಿನ ಚರ್ಚೆಯೇನೂ ನಡೆಯಲಿಲ್ಲ, ಆದರೆ ತಾನೀಗ ರಾಜಕೀಯದಿಂದ ನಿವೃತ್ತನಾಗಿರುವುದರಿಂದ ಚುನಾವಣೆಯಲ್ಲಿ ಸಹಕರಿಸುವಂತೆ ಸಿದ್ದರಾಮಯ್ಯ ಕೋರಿದರು ಎಂದು ಪ್ರಸಾದ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ನಾಳೆ ರಾಜ್ಯಕ್ಕೆ ಅಗಮಿಸುತ್ತಿದ್ದು ಅವರ ಕಾರ್ಯಕ್ರಮದಲ್ಲಿ ಭಾಗಿಯಾಗ್ತೀರಾ ಅಂತ ಕೇಳಿದ ಪ್ರಶ್ನೆಗೆ ಅವರು, ಅರೋಗ್ಯ ಸರಿಯಿಲ್ಲದ ಕಾರಣ ಯಾವುದೇ ಚುನಾವಣಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದೇನೆ ಮತ್ತು ತನಗೆ ಮನೆಯಿಂದ ಹೊರಗೆ ಹೋಗುವುದು ಸಾಧ್ಯವಾಗುತ್ತಿಲ್ಲ ಎಂದು ಪ್ರಸಾದ್ ಹೇಳಿದರು.














