ಬೆಂಗಳೂರು: ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ರಾಜ್ಯದ 15 ತಿಂಗಳ ಮೌರ್ಯ ಎಂಬ ಪುಟ್ಟ ಕಂದನ ಪ್ರಾಣ ಉಳಿಸಲು ಮಾನವೀಯ ನೆಲೆಗಟ್ಟಿನಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರೇ, ಕರ್ನಾಟಕದ 15 ತಿಂಗಳ ಮೌರ್ಯ ಎಂಬ ಪುಟ್ಟ ಕಂದ ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಮಗುವಿನ ಖಾಯಿಲೆಯನ್ನು ಗುಣಪಡಿಸಬಹುದಾದ ಝೋಲ್ಗೆನ್ ಸ್ಮ ಎಂಬ ಚುಚ್ಚುಮದ್ದನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದ್ದು, ಅದರ ಬೆಲೆ ರೂ. 17.5 ಕೋಟಿ ಇದೆ. ಕೇಂದ್ರ ಸರ್ಕಾರವು ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಆಮದು ಸುಂಕದಿಂದ ವಿನಾಯಿತಿ ನೀಡುವ ಮೂಲಕ ಕರುನಾಡಿನ ಪುಟ್ಟ ಕಂದನ ಪ್ರಾಣ ಉಳಿಸಲು ನೆರವಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡುತ್ತಿದ್ದಾರೆ.
ಕರ್ನಾಟಕದ 15 ತಿಂಗಳ ಪುಟ್ಟ ಕಂದನ ಚಿಕಿತ್ಸೆಗೆ ಬೇಕಾದ 17.5 ಕೋಟಿ ರೂ. ಹೊಂದಿಸುವುದು ಕುಟುಂಬಕ್ಕೆ ಅಸಾಧಾರಣ ಸವಾಲಗಾಗಿ ಪರಿಣಮಿಸಿದೆ. ಔಷಧದ ಬೆಲೆಯೇ ಹೆಚ್ಚಾಗಿದ್ದು, ಜೊತೆಗ ಆಮದು ತೆರಿಗೆಗಳಿಂದ ಹಣಕಾಸಿನ ಹೊರೆ ಗಣನೀಯವಾಗಿ ಹೆಚ್ಚಳವಾಗುತ್ತದೆ. ಹಾಗಾಗಿ ತಮ್ಮ ಕಂದನ ಪ್ರಾಣ ಉಳಿಸುವ ಔಷಧಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಅವರಿಗೆ ಅಸಾಧ್ಯವಾಗಿದೆ.
ಮಗುವಿನ ಚಿಕಿತ್ಸೆಗೆ ಅಗತ್ಯವಿರುವ ಝೋಲ್ಗೆನ್ ಸ್ಮ ಮೇಲಿನ ಆಮದು ತೆರಿಗೆಯನ್ನು ಮನ್ನಾ ಮಾಡುವಂತೆ ಹಣಕಾಸು ಸಚಿವಾಲಯಕ್ಕೆ ನಿರ್ದೇಶನ ನೀಡಿ. ಚುಚ್ಚುಮದ್ದಿನ ಖರೀದಿಗೆ ಸಹಾಯ ಮಾಡಲು PM CARES ನಿಧಿಯಿಂದ ಹಣಕಾಸಿನ ಬೆಂಬಲವನ್ನು ನೀಡಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ನೀವು ಮಾಡುವ ಈ ಸಹಾಯದಿಂದ ಮೌರ್ಯ ಅವರ ಕುಟುಂಬಕ್ಕೆ ಆರ್ಥಿಕ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ. ಇದು ಕಿರಿಯ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಮ್ಮ ರಾಷ್ಟ್ರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.