ಮನೆ ಸ್ಥಳೀಯ ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಸಿಎಂ ಸಿಂಧೂರವೇ ಸಾಕ್ಷಿ: ಪ್ರತಾಪ್‌ ಸಿಂಹ!

ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಸಿಎಂ ಸಿಂಧೂರವೇ ಸಾಕ್ಷಿ: ಪ್ರತಾಪ್‌ ಸಿಂಹ!

0

ಮೈಸೂರು : ಸಿದ್ದರಾಮಯ್ಯನವರು ಪಾಕಿಸ್ತಾನ ವಿರುದ್ಧದ ಸ್ಥಿತಿಗತಿಯ ಬಗ್ಗೆ ತಮ್ಮ ನಿಲುವು ಬದಲಾಯಿಸಿಕೊಂಡಿದ್ದು, ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಸಿಎಂ ಸಿಂಧೂರ” ಎನ್ನುವುದು ರಾಜಕೀಯ ಪರಿವರ್ತನೆಯ ಚಿಹ್ನೆ ಎಂದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ ಎಂಬ ಜೈಕಾರ ಹಾಕಿಕೊಂಡು ಎಲ್ಲಾ ಬಿಜೆಪಿ ಕಾರ್ಯಕರ್ತರು ಬೆಳೆದಿದ್ದಾರೆ. ಮೋದಿ ಅವರು ಬಾಯಿ ಮಾತಿಗೆ ಈ ಜಯ ಘೋಷ ಹಾಕಲಿಲ್ಲ. ಇವತ್ತು ಆಪರೇಷನ್ ಸಿಂಧೂರ ಮಾಡಿ ಅದನ್ನು ನಿಜ ಮಾಡಿದ್ದಾರೆ. “ವಾಜಪೇಯಿ ಅವರ ನ್ಯೂಕ್ಲಿಯರ್ ಟೆಸ್ಟ್ ನಮ್ಮ ಹೆಮ್ಮೆ, ಈಗ ಮೋದಿ ಅವರ ಕಾರ್ಯಾಚರಣೆ ಕೂಡ ದೇಶದ ಹೆಮ್ಮೆ” ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಮೊದಲು ಯುದ್ಧ ವಿರೋಧಿ ನಿಲುವು ತೆಗೆದುಕೊಂಡು ಪಾಕಿಸ್ತಾನ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನುವ ಆರೋಪವನ್ನು ಪ್ರತಾಪ್ ಸಿಂಹ ಮಾಡಿದರು. “ಜನರು ತಿರುಗಿ ಬಿದ್ದ ಮೇಲೆ ಅವರು ತಮ್ಮ ನಿಲುವು ಬದಲಾಯಿಸಿ ಶಾಂತಿಯ ಮಂತ್ರ ಪಠಿಸಿದರು. ಇಂದು ಹಣೆಗೆ ಸಿಂಧೂರ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಇಂದು ಸಿಂಧೂರರಾಮಯ್ಯ ಆಗಿದ್ದಾರೆ. ಹಿಂದೂಗಳು ಒಟ್ಟಾಗಿದ್ದಾರೆ. ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಸಿಎಂ ಸಿಂಧೂರವೇ ಸಾಕ್ಷಿ ಎಂದು ಟಾಂಗ್‌ ಕೊಟ್ಟಿದ್ದಾರೆ.

ಪ್ರತಾಪ್ ಸಿಂಹ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಉಲ್ಲೇಖ ನೀಡಿ, “ಗಾಂಧೀಜಿಯ ಶಾಂತಿಯ ಮಂತ್ರದ ಜೊತೆಗೆ ಭಗತ್ ಸಿಂಗ್, ಸಾರ್ವಕರ್, ಸುಭಾಷ್ ಚಂದ್ರ ಬೋಸ್‌ರಂತಹ ಕ್ರಾಂತಿಕಾರಿಗಳ ಬಲಿದಾನವೂ ಸ್ವಾತಂತ್ರ್ಯದ ಮುಕ್ತಿಗೆ ಕಾರಣ” ಎಂದು ಹೇಳಿದರು. ಯುದ್ಧ ಗೆದ್ದ ಬಳಿಕವೇ ಶಾಂತಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಾಕಿಸ್ತಾನದ ಉಗಮಕ್ಕೂ ಕಾಂಗ್ರೆಸ್ ಪಕ್ಷವೇ ಕಾರಣ ಎನ್ನುವ ಗಂಭೀರ ಆರೋಪವನ್ನು ಪ್ರತಾಪ್ ಸಿಂಹ ಮಾಡಿದರು. “ಪಾಕಿಸ್ತಾನ ಎಂಬ ಶಿಶುವನ್ನು ಹುಟ್ಟಿಸಿದ್ದವರು ಕಾಂಗ್ರೆಸ್. ಅದರಿಂದಲೇ ಕಾಂಗ್ರೆಸ್‌ಗೆ ಪಾಕಿಸ್ತಾನ ವಿರುದ್ಧದ ಯುದ್ಧ ಹಿಂಸೆ ಅನಿಸುತ್ತದೆ.” ಕಾಂಗ್ರೆಸ್ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯರ ಒಳಗಡೆಯೂ ನೋವು ಬಂದು ಶಾಂತಿಯ ಮಂತ್ರ ಪಠಿಸಿದ್ದರು ಎಂದು ಪ್ರತಾಪ್‌ ಸಿಂಹ ಕಾಲೆಳೆದಿದ್ದಾರೆ.