ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ‘ವಿಶ್ವದ ಮೊದಲ ಸಂಸತ್’ ಎಂಬ ಖ್ಯಾತಿಯ ‘ಅನುಭವ ಮಂಟಪದ’ ಬೃಹತ್ ತೈಲವರ್ಣ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು.
ಸುವರ್ಣಸೌಧದ ಸೆಂಟ್ರಲ್ ಹಾಲ್ ಮುಂಭಾಗ ಬಿಡಿಸಿದ ತೈಲವರ್ಣ ಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಭಾಧ್ಯಕ್ಷ ಯು. ಟಿ. ಖಾದರ್, ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಹೆಚ್. ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮುಂತಾದವರು ಉಪಸ್ಥಿತರಿದ್ದರು.
ಕ್ಯಾನ್ವಾಸ್ ಮೇಲೆ ತೈಲ ಮಾಧ್ಯಮದ ಮೂಲಕ ರಚಿಸಲ್ಪಟ್ಟ 20 ಅಡಿ ಉದ್ದ ಮತ್ತು 10 ಅಡಿ ಅಗಲದ ಈ ವಿಶೇಷ ಚಿತ್ರ ಇದಾಗಿದೆ. ಬೆಂಗಳೂರು ಚಿತ್ರಕಲಾ ಪರಿಷತ್ನ ಕಲಾವಿದ ಸತೀಶ್ ರಾವ್, ಶಿವಮೊಗ್ಗದ ಶ್ರೀಕಾಂತ್ ಹೆಗಡೆ ಸಿದ್ದಾಪುರ, ಶೇಷಾದ್ರಿಪುರಂ ಕೆನ್ ಸ್ಕೂಲ್ ಕಲಾಶಾಲೆಯ ಅಶೋಕ್ ಯು. ಜಗಳೂರು, ರಾಜಾ ರವಿವರ್ಮ ಕಲಾಶಾಲೆಯ ರೂಪಾ ಎಂ. ಆರ್. ವೀರಣ್ಣ ಮಡಿವಾಳಪ್ಪ ಬಲ್ಲಿ, ಬೈಲಹೊಂಗಲ ಮತ್ತು ಶ್ರೀ ಮಹೇಶ ನಿಂಗಪ್ಪ ಹಾಗೂ ಜಮಖಂಡಿಯ ದಫಲಾಪುರ ಅವರ ಕುಂಚದಲ್ಲಿ ಮೂಡಿಬಂದಿದೆ.
ಅನುಭವ ಮಂಟಪವು ಮಾನವೀಯತೆ ಮತ್ತು ಸಮಾನತೆಯ ಮಹಾನ್ ಸಂದೇಶವನ್ನು ಸಮಸ್ತ ವಿಶ್ವಕ್ಕೆ ತೋರಿಸಿಕೊಟ್ಟ ಶಕ್ತಿ ಕೇಂದ್ರವಾಗಿತ್ತು. ಸರ್ವಜಾತಿ, ಧರ್ಮಗಳ ಶರಣರನ್ನು ಸ್ವೀಕರಿಸಿದ ಪವಿತ್ರ ತಾಣವಾಗಿದೆ. ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಸಿದ್ದರಾಮೇಶ್ವರ, ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಮೇದಾರ ಕೇತಯ್ಯ, ಬಹುರೂಪಿ ಚೌಡಯ್ಯ,, ಕೇತಲದೇವಿ, ದುಗ್ಗಳೆ, ಕಾಳವ್ವ ಮೊದಲಾದ ಶರಣರ ದಿವ್ಯ ಚಿಂತನೆ ಮತ್ತು ಅನುಭವಗಳನ್ನು ಜಗತ್ತಿಗೆ ಪರಿಚಯಿಸಿರುವುದು ಅನುಭವ ಮಂಟಪವಾಗಿದೆ.