ಮೈಸೂರು: ರಾಜ್ಯದ ಮುಖ್ಯಮಂತ್ರಿ ಸ್ಥಾನ ಗಟ್ಟಿಯಾಗಿದ್ದು, ಆ ಸ್ಥಾನದಲ್ಲಿರುವ ನಾಯಕನೂ ಸಹ ಗಟ್ಟಿಯಾಗಿದ್ದಾರೆ. ಹೀಗಿರುವಾಗ ಯಾವುದೇ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸಿಎಂ ಸ್ಥಾನ ಬದಲಾವಣೆಯ ಬಗ್ಗೆ ಅವಧಿಯವಲ್ಲದ ಊಹಾಪೋಹಗಳನ್ನೇ ಹರಡಲಾಗುತ್ತಿದೆ. ಆದರೆ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಸದುದ್ದೇಶದಿಂದ ಕೆಲಸ ಮಾಡುತ್ತಿದೆ,” ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿಯಲ್ಲಿ ನಡೆದ ಎನ್‌ಫೋರ್ಸ್ಮೆಂಟ್ ಡೈರೆಕ್ಟರೇಟ್ (ED) ದಾಳಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, “ದೇಶದ ಸಂವಿಧಾನ ತನಿಖಾ ಸಂಸ್ಥೆಗಳಿಗೆ ಕಾರ್ಯ ಸ್ವಾತಂತ್ರ್ಯ ನೀಡಿದೆ. ಯಾವುದೇ ಆರೋಪ ಅಥವಾ ದೂರು ಬಂದರೆ, ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತವೆ. ಆದರೆ ಇವು ರಾಜಕೀಯ ನಿಟ್ಟಿನಲ್ಲಿರಬಾರದು. ರಾಜಕೀಯ ದುರ್ಬುದ್ಧಿಯಿಂದ ದಾಳಿ ನಡೆಯಬಾರದು,” ಎಂದು ಹೇಳಿದರು.
ಬೆಂಗಳೂರು ಘಟನೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಮಾತನಾಡಿದ ಮಹದೇವಪ್ಪ, “ವಿಪಕ್ಷಗಳ ಕೆಲಸವೇ ಸರ್ಕಾರವನ್ನು ಟೀಕಿಸುವುದು. ಆದರೆ ಬೆಂಗಳೂರಿನಲ್ಲಿ ನಡೆದ ಘಟನೆ ಬಹಳ ವಿಷಾದಕರ. ನಿರೀಕ್ಷೆಗಿಂತ ಹೆಚ್ಚು ಜನರು ಬಂದ ಕಾರಣ ದುರ್ಘಟನೆ ಸಂಭವಿಸಿತು. ಇಂತಹ ಸಂದರ್ಭದಲ್ಲಿ ನೈತಿಕ ಹೊಣೆಗಾರಿಕೆ ಅಗತ್ಯ, ಆದರೆ ರಾಜೀನಾಮೆ ನೀಡುವುದು ಏಕೈಕ ಪರಿಹಾರವಲ್ಲ,” ಎಂದು ಹೇಳಿದರು.
“ಈ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣವಾದ ಮೇಲೆ ಯಾರಿಂದ ತಪ್ಪಾಗಿದೆ ಎಂಬುದು ಸ್ಪಷ್ಟವಾಗುತ್ತದೆ,” ಎಂದು ಅವರು ತಿಳಿಸಿದರು.ಜಾತಿಗಣತಿ ವರದಿ ಕುರಿತಂತೆ ಮಾತನಾಡಿದ ಸಚಿವರು, “ಜಾತಿಗಣತಿ ವರದಿ ಕುರಿತು ನಾಳೆ (ಗುರುವಾರ) ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಕುರಿತಂತೆ ಎಲ್ಲ ನಿರ್ಣಯಗಳು ಆ ಸಂದರ್ಭದಲ್ಲಿ ಕೈಗೊಳ್ಳಲಾಗುತ್ತವೆ. ಜನರ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ,” ಎಂದು ತಿಳಿಸಿದ್ದಾರೆ.
ಸಂಪುಟ ಪುನಾರಚನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಇದು ಸಂಪೂರ್ಣವಾಗಿ ಹೈಕಮಾಂಡ್‌ಗೆ ಸಂಬಂಧಪಟ್ಟ ವಿಷಯ. ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ಹೈಕಮಾಂಡ್ ನನ್ನ ಅಭಿಪ್ರಾಯ ಕೇಳಿದರೆ ನಾನು ನನ್ನ ಸಲಹೆ ನೀಡಲು ಸಿದ್ಧನಿದ್ದೇನೆ,” ಎಂದು ಹೇಳಿದ್ದಾರೆ.















