ಲಕ್ನೋ(ಉತ್ತರಪ್ರದೇಶ): ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ iPhone ಡೆಲಿವರಿ ಮಾಡಲು ಹೋದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಡೆಲಿವರಿಗೆ ಬಂದ ಯುವಕನನ್ನೇ(30) ಕೊಲೆಗೈದ ಘಟನೆ ಲಕ್ನೋದಲ್ಲಿ ಸೋಮವಾರ (ಸೆ.30) ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯುವಕನನ್ನು ಕೊಂದು ಇಂದಿರಾ ಕಾಲುವೆಗೆ ಎಸೆದಿದ್ದು, ಶವ ಪತ್ತೆಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆಗೆ ಮಾಹಿತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಚಿನ್ಹಾಟ್ ನ ಗಜಾನನ್ ಎಂಬಾತ ಫ್ಲಿಪ್ ಕಾರ್ಟ್ ನಲ್ಲಿ 1.5 ಲಕ್ಷ ಮೌಲ್ಯದ ಐಫೋನ್ ಗೆ ಆರ್ಡರ್ ಮಾಡಿದ್ದು, ಅದನ್ನು ಕ್ಯಾಶ್ ಆನ್ ಡೆಲಿವರಿ ಪಾವತಿ ಮೂಲಕ ತೆಗೆದುಕೊಳ್ಳುವ ಆಯ್ಕೆ ಮಾಡಿಕೊಂಡಿದ್ದ ಎಂದು ಉಪ ಪೊಲೀಸ್ ಆಯುಕ್ತ ಶಶಾಂಕ್ ಸಿಂಗ್ ತಿಳಿಸಿದ್ದಾರೆ.
ಸೆಪ್ಟೆಂಬರ್ 23ರಂದು ನಿಶಾಂತ್ ಗಂಜ್ ನ ಭರತ್ ಸಾಹು ಎಂಬ ಡೆಲಿವರಿ ಬಾಯ್, ಐಫೋನ್ ಡೆಲಿವರಿ ಮಾಡಲು ಹೋಗಿದ್ದು, ಅಲ್ಲಿ ಗಜಾನನ ಮತ್ತು ಅವನ ಗೆಳೆಯ ಸೇರಿಕೊಂಡು ಸಾಹುವನ್ನು ಹ*ತ್ಯೆಗೈದಿದ್ದರು. ನಂತರ ಆತನ ಶವವನ್ನು ಗೋಣಿಚೀಲದಲ್ಲಿ ಹಾಕಿ ಇಂದಿರಾ ಕಾಲುವೆಗೆ ಎಸೆದಿದ್ದರು ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ಎರಡು ದಿನಗಳಿಂದ ಸಾಹು ಮನೆಗೆ ಬಾರದಿರುವುದನ್ನು ಕಂಡು, ಕುಟುಂಬ ಸದಸ್ಯರು ಸೆಪ್ಟೆಂಬರ್ 25ರಂದು ಚಿನ್ಹಾಟ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸರು ಸಾಹು ಮೊಬೈಲ್ ಕರೆಯ ವಿವರವನ್ನು ಪರಿಶೀಲಿಸಿದಾಗ, ಲೊಕೇಶನ್ ಪತ್ತೆಯಾಗಿತ್ತು. ಹೀಗೆ ಜಾಡು ಹಿಡಿದು ಹೋದ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಬಿದ್ದಿರುವುದಾಗಿ ವರದಿ ತಿಳಿಸಿದೆ.